

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜನೆ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಡೆ ನಾಡಪ್ರಭು ಕೆಂಪೇಗೌಡರಿಗೆ ಮಾಡುತ್ತಿರುವ ದೊಡ್ಡ ಅವಮಾನ ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್.ಜಗದೀಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಂಪೇಗೌಡರ ದೂರದೃಷ್ಟಿಯಿಂದ ದೊಡ್ಡ ನಗರವಾಗಿ ಬೆಳೆದಿರುವ ಬೆಂಗಳೂರು ವಿಶ್ವವಿಖ್ಯಾತವಾಗಿ ಹೆಸರು ಪಡೆದಿದೆ. ಇಂತಹ ನಗರವನ್ನು ವಿಭಜನೆಯ ಮೂಲಕ ಒಡೆದು ಆಳುವ ನೀತಿಯನ್ನು ಸರ್ಕಾರ ಅನುಸರಿಸುತ್ತಿದೆ. ಪಾಲಿಕೆ ವಿಭಜನೆ ಜನರನ್ನು ದಿಕ್ಕು ತಪ್ಪಿಸುವ ಯತ್ನವಾಗಿದ್ದು, ಸಾಮಾನ್ಯ ಪ್ರಜೆಗೆ ಯಾವ ಉಪಯೋಗವೂ ಇಲ್ಲ. ಕೇವಲ ರಾಜಕಾರಣಿಗಳ, ಅಧಿಕಾರಿಗಳ ಅನುಕೂಲಕ್ಕೆ, ಅವರ ಜೇಬು ತುಂಬುವುದಕ್ಕೆ ಹೊರಟಿದ್ದಾರೆ.
ಕೆಂಪೇಗೌಡರು 500 ವರ್ಷಗಳ ಹಿಂದೆಯೇ ಎಲ್ಲ ಜನಾಂಗದ ವ್ಯಾಪಾರಿಗಳನ್ನು ಕರೆತಂದು ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರು. ಅವರ ದೂರದೃಷ್ಟಿಗೆ ವಿರುದ್ಧವಾಗಿ ಬೆಂಗಳೂರನ್ನು 7 ಹೋಳುಗಳಾಗಿ ತುಂಡರಿಸಿದರೆ, ಕೇವಲ ಶ್ರೀಮಂತರೇ ಹೆಚ್ಚಿರುವ ಭಾಗದಲ್ಲಿ ಅಭಿವೃದ್ಧಿಯಾಗಲಿದ್ದು, ಬಡವರಿರುವ ಭಾಗ ಅಭಿವೃದ್ಧಿಯಿಂದ ವಂಚಿತವಾಗುತ್ತದೆ ಎಂದು ಬಿ.ಎನ್.ಜಗದೀಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ನಗರವನ್ನು ವಿಭಜನೆ ಮಾಡಲು ಹೊರಟಿರುವ ಸರ್ಕಾರ ತಕ್ಷಣ ನಿರ್ಧಾರ ಕೈಬಿಡಬೇಕು ಇಲ್ಲವಾದರೆ ಜಯ ಕರ್ನಾಟಕ ಸಂಘಟನೆ ನಿರಂತರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದ್ದಾರೆ.