ಜಯದೇವ ಆಸ್ಪತ್ರೆಯಲ್ಲಿ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ

Jayadeva hospital
Published on

ಬೆಂಗಳೂರು: ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ಸೆ. 24ರಿಂದ 28 ರವರೆಗೆ 150 ಮಂದಿಗೆ ಉಚಿತ ಸ್ಟೆಂಟ್ ಅಳವಡಿಸುವ ಆಂಜಿಯೋಪ್ಲಾಸ್ಟಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಡಾ.ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್ ಹಾಗೂ ಅಮೆರಿಕದ ಮೆಡ್‌ಟ್ರಾನಿಕ್ಸ್ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಾಗಾರ ನಡೆಯಲಿದೆ. ಸೆ.24 ಹಾಗೂ ಸೆ.25ರಂದು ಸಂಸ್ಥೆಯ ಮೈಸೂರು ಶಾಖೆ, ಸೆ.26ರಿಂದ ಸೆ.28ರವರೆಗೆ ಬೆಂಗಳೂರಿನ ಸಂಸ್ಥೆಯ ಆವರಣದಲ್ಲಿ ಕಾರ್ಯಾಗಾರ ನಡೆಯಲಿದೆ.

ಬಡ ರೋಗಿಗಳು ಹಾಗೂ ಬಿಪಿಎಲ್ ಕುಟುಂಬದ ಹಿರಿಯ ನಾಗರಿಕರಿಗಾಗಿ ಈ ಕಾರ್ಯಾಗಾರ ಆಯೋಜಿಸಲಾಗಿದೆ. ಪ್ರತಿ ರೋಗಿಗೂ ಉನ್ನತಮಟ್ಟದ ಸ್ಟೆಂಟ್‌ಗಳನ್ನು ಉಚಿತವಾಗಿ ಅಳವಡಿಸಲಾಗುತ್ತದೆ. ಈಗಾಗಲೇ ಆ್ಯಂಜಿಯೋಗ್ರಾಂ ತಪಾಸಣೆಗೆ ಒಳಪಟ್ಟ ರೋಗಿಗಳು ಈ ಸೌಲಭ್ಯ ಪಡೆಯಬಹುದು. ರೋಗಿಗಳು ದಾಖಲಾತಿ ಸಂದರ್ಭದಲ್ಲಿ ಬಿಪಿಎಲ್ ಕಾರ್ಡ್ ಅಥವಾ ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಅರ್ಹರು ಸೆ.21ರೊಳಗೆ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್. ರವೀಂದ್ರನಾಥ್ ತಿಳಿಸಿದ್ದಾರೆ.

ಮಾಹಿತಿಗೆ: ನಿರ್ದೇಶಕರ ಕಚೇರಿ, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬನ್ನೇರುಘಟ್ಟ ರಸ್ತೆ, ಜಯನಗರ 9ನೇ ಬ್ಲಾಕ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net