

ಬೆಂಗಳೂರು: ಮೆಟ್ರೋ ಇಂಟರ್ಚೇಂಜ್ ನಿಲ್ದಾಣಕ್ಕಾಗಿ ಅರ್ಧಕ್ಕೆ ಸ್ಥಗಿತಗೊಂಡಿದ್ದ ಜಯದೇವ ಮೇಲ್ಸೇತುವೆಯ ಲೂಪ್ ತೆರವು ಕಾಮಗಾರಿ ಗುರುವಾರ ಆರಂಭವಾಗುತ್ತಿದೆ.
ಮೆಟ್ರೋ 2ನೇ ಹಂತದ ಯೋಜನೆಯಲ್ಲಿ ಆರ್.ವಿ. ರಸ್ತೆ- ಬೊಮ್ಮಸಂದ್ರ ಹಾಗೂ ಗೊಟ್ಟಿಗೆರೆ- ನಾಗವಾರ ಮಾರ್ಗಗಳ ಇಂಟರ್ಚೇಂಜ್ ನಿಲ್ದಾಣ ಜಯದೇವ ಆಸ್ಪತ್ರೆ ಬಳಿ ನಿರ್ಮಾಣ ವಾಗಲಿದೆ. ಅದಕ್ಕಾಗಿ ಜಯದೇವ ಆಸ್ಪತ್ರೆ ಎದುರಿನ ಮೇಲ್ಸೇತುವೆ ತೆರವು ಮಾಡಲಾಗುತ್ತಿದೆ. ಎರಡು ಹಂತದಲ್ಲಿ ತೆರವು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಮೊದಲಿಗೆ ಮೇಲ್ಸೇತುವೆಯ ಒಂದು ಭಾಗವಾದ 150 ಮೀ¬ಟರ್ ಉದ್ದದ ಲೂಪ್ ತೆರವು ಕಾಮಗಾರಿ ಕೈಗೊಳ್ಳಲಾಗಿತ್ತು. ಇದೀಗ ಉಳಿದ ಮೇಲ್ಸೇತುವೆ ಭಾಗ ವನ್ನು ಗುರುವಾರದಿಂದ ತೆರವು ಮಾಡಲಾಗುತ್ತದೆ.
ರಾತ್ರಿಯಲ್ಲಿ ಕಾರ್ಯಾಚರಣೆ: ಮೂರು ತಿಂಗಳವರೆಗೆ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ನಡೆಸಲಾಗುತ್ತದೆ. ಉಳಿದ ಸಮಯದಲ್ಲಿ ವಾಹನ ಸಂಚಾರವಿರಲಿದೆ.
ಸಂಚಾರದಟ್ಟಣೆ ಹೆಚ್ಚಳ: ಬನಶಂಕರಿಯಿಂದ ಸಿಲ್ಕ್ ಬೋರ್ಡ್ ಕಡೆಗೆ ತೆರಳುವ ವಾಹನಗಳು ಪರ್ಯಾಯ ಮಾರ್ಗ ಹುಡುಕಿಕೊಳ್ಳಬೇಕಿದೆ. ಹೀಗಾಗಿ ಆ ಮಾರ್ಗದಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹೆಚ್ಚಲಿದೆ.
ಮಾರ್ಗ ಬದಲು: ಮೇಲ್ಸೇತುವೆ ತೆರವಿನಿಂದಾಗಿ ವಾಹನ ಸಂಚಾರಕ್ಕೆ ಬದಲಿ ಮಾರ್ಗ ನಿಗದಿ ಮಾಡಲಾಗುತ್ತಿದೆ. ಸಿಲ್ಕ್ಬೋರ್ಡ್ ಕಡೆಗೆ ತೆರಳುವ ವಾಹನಗಳು ರಾಘವೇಂದ್ರ ಮಠದ ಬಳಿ ಎಡ ತಿರುವು ಪಡೆಯಬೇಕಿದೆ. ಸಿಲ್ಕ್ಬೋರ್ಡ್ ಕಡೆಯಿಂದ ಜಯನಗರ, ಬನಶಂಕರಿ ಕಡೆಗೆ ತೆರಳುವ ವಾಹನಗಳು ಅಕ್ಸಾ ಸಿಗ್ನಲ್ (ಮಡಿವಾಳ ಕೆರೆ ಬಳಿ)ನಲ್ಲಿ ಬಲ ತಿರುವು ಪಡೆದು ಸಾಗಬೇಕಿದೆ.
ಒಂದರ ಮೇಲೊಂದು ಮಾರ್ಗ
ಜಯದೇವ ಆಸ್ಪತ್ರೆಯ ಜಂಕ್ಷನ್ನಲ್ಲಿ 70 ಅಡಿ ಎತ್ತರದಲ್ಲಿ ಗೊಟ್ಟಿಗೆರೆ-ನಾಗವಾರ ಮಾರ್ಗದ ನಿಲ್ದಾಣ ಬರಲಿದೆ. ಕೆಳಗೆ ಆರ್.ವಿ. ರಸ್ತೆ- ಬೊಮ್ಮಸಂದ್ರ ನಿಲ್ದಾಣ ಹಾಗೂ ಅದರ ಕೆಳಗೆ ಹೊಸ ಮೇಲ್ಸೇತುವೆ ನಿರ್ವಣವಾಗಲಿದೆ.