ಬೆಂಗಳೂರು : ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ನಡೆದಿರುವ ಗುಂಡಿನ ದಾಳಿಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೋಲಿಸ್ ಇಲಾಖೆ ತನಿಖೆ ಚುರುಕುಗೊಳಿಸಿ ತಕ್ಷಣ ಆರೋಪಿಗಳನ್ನು ಬಂಧಿಸುವಂತೆ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷ ಬಿ.ಎನ್. ಜಗದೀಶ್ ಒತ್ತಾಯಿಸಿದ್ದಾರೆ.
ರಿಕ್ಕಿ ರೈ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು, ಪ್ರಕರಣದ ಗಂಭೀರತೆಯನ್ನು ಆಧರಿಸಿ ಆರೋಪವಿರುವ ವ್ಯಕ್ತಿಗಳು ತಲೆಮರೆಸಿಕೊಳ್ಳುವ ಮೊದಲು ಬಂಧಿಸಿ ಬೆಂಗಳೂರು ನಗರದಿಂದ ಹೊರಹೋಗದಂತೆ ತಡೆಯಬೇಕು. ರಿಕ್ಕಿ ವಿದೇಶದಿಂದ ಬರುವುದನ್ನೇ ಕಾಯುತ್ತಿದ್ದ ವ್ಯಕ್ತಿಗಳು ಹೊಂಚು ಹಾಕಿಕೊಂಡು ಕೊಲೆ ಮಾಡುವ ಪ್ರಯತ್ನಕ್ಕೆ ಮುಂದಾಗಿರುವುದು ವಿಷಾದನೀಯ. ಆಸ್ತಿ ವಿವಾದಗಳು ಏನೇ ಇದ್ದರೂ ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಬೇಕು. ಕೋರ್ಟ್ ಮೆಟ್ಟಿಲೇರಿದ ನಂತರ ವಿವಾದ ಬಗೆಹರಿಯುವವರೆಗೂ ತಾಳ್ಮೆಯಿಂದ ಕಾಯದೇ ಕೊಲೆ ಮಾಡುವ ಹಂತಕ್ಕೆ ಹೋಗುವುದು ತಪ್ಪು ಎಂದು ಹೇಳಿದ್ದಾರೆ.