ಜಯ.ಸಿ.ಸುವರ್ಣ ಇನ್ನಿಲ್ಲ

jaya
Published on

ಮಂಗಳೂರು/ಮೂಲ್ಕಿ: ಬಿಲ್ಲವರ ಮಹಾಮಂಡಲ ಸ್ಥಾಪಕಾಧ್ಯಕ್ಷ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಭಾರತ್ ಕೋ-ಅಪರೇಟಿವ್ ಬ್ಯಾಂಕ್ ಮಾಜಿ ಅಧ್ಯಕ್ಷ, ಮೂಲ್ಕಿ ಜಯ ಸಿ.ಸುವರ್ಣ(74) ಬುಧವಾರ ಮುಂಜಾನೆ ಮುಂಬೈಯಲ್ಲಿ ನಿಧನರಾದರು. ಅವರು ಪತ್ನಿ ಹಾಗೂ ನಾಲ್ವರು ಪುತ್ರರನ್ನು ಅಗಲಿದ್ದಾರೆ.

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಕನಸಿಗೆ ಬೆಂಬಲವಾಗಿ ನಿಂತು ಆರ್ಥಿಕ ಸಂಪನ್ಮೂಲ ಕ್ರೋಢೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಂಬೈ, ಗುಜರಾತ್ ಸೇರಿದಂತೆ ದೇಶ, ವಿದೇಶಗಳಲ್ಲಿರುವ ಬಿಲ್ಲವರನ್ನು ಸಂಪರ್ಕಿಸಿ ಶ್ರೀ ಕ್ಷೇತ್ರದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ಮಾಡಿದ್ದರು. ಮುಂಬೈಯಲ್ಲಿ ಬಿಲ್ಲವರಿಗೆ ಸ್ಫೂರ್ತಿಯಾಗಿ, ಸಮಸ್ತ ಬಿಲ್ಲವ ಸಮಾಜವನ್ನು ಒಂದಾಗಿಸಿ ಮುಂಬೈ ಬಿಲ್ಲವ ಭವನ ರೂಪಿಸಿದ್ದರು.

ಬ್ರಹ್ಮಶ್ರೀ ನಾರಾಯಣಗುರುಗಳ ತತ್ವ, ಚಿಂತನೆ ಬದುಕಿನಲ್ಲಿ ಅಳವಡಿಸಿಕೊಂಡು ಬಿಲ್ಲವ ಸಮಾಜದ ಅಭಿವೃದ್ಧಿಗೆ ಹಲವು ಕೊಡುಗೆ ನೀಡಿದ್ದಾರೆ. ಚತುರ ಸಂಘಟಕರಾಗಿದ್ದ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಿಗೆ ಅಪಾರ ಕೊಡುಗೆ ನೀಡಿದ್ದಾರೆ. ಪ್ರಸ್ತುತ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಗೌರವಾಧ್ಯಕ್ಷ, ಮೂಲ್ಕಿ ಮತ್ತು ಪಡುಬೆಳ್ಳೆ ಶ್ರೀ ನಾರಾಯಣ ಗುರು ಶಿಕ್ಷಣ ಸಂಸ್ಥೆಗಳ ಆಡಳಿತ ಸಮಿತಿ ಅಧ್ಯಕ್ಷರಾಗಿದ್ದರು. ಮೂಲ್ಕಿಯಲ್ಲಿ ಮಹಾಮಂಡಲ ಭವನ ನಿರ್ಮಿಸಿದ್ದರು.

ಮುಂಬೈ ಬಿಲ್ಲವರ ಅಸೋಸಿಯೇಶನ್ ಹಿರಿಯರಿಂದ ಸ್ಥಾಪಿತವಾದ ಭಾರತ್ ಕೋ-ಅಪರೇಟಿವ್ ಬ್ಯಾಂಕಿನ ಚುಕ್ಕಾಣಿ ಹಿಡಿದು 5 ಶಾಖೆಗಳಿದ್ದ ಸಂಸ್ಥೆಯನ್ನು ಜನಾರ್ದನ ಪೂಜಾರಿಯವರ ಬೆಂಬಲದೊಂದಿಗೆ 100ಕ್ಕೂ ಅಧಿಕ ಶಾಖೆಗಳಾಗಿ ವಿಸ್ತರಿಸಿದ್ದರು. ಸಮಾಜದ ಸಾವಿರಾರು ಮಂದಿಗೆ ಉದ್ಯೋಗ, ಲಕ್ಷಾಂತರ ಮಂದಿಗೆ ಸಾಲದ ಮೂಲಕ ಆರ್ಥಿಕ ಶಕ್ತಿ ನೀಡಿ ಅವರ ವ್ಯವಹಾರಕ್ಕೆ ನೆರವಾಗಿದ್ದಾರೆ. ದೇಶದ ಮುಂಚೂಣಿಯ ಬ್ಯಾಂಕ್ ಎಂಬ ಹೆಗ್ಗಳಿಕೆಯೊಂದಿಗೆ ಹಲವಾರು ಪ್ರಶಸ್ತಿ ಪಡೆಯುವಲ್ಲಿ ಅವರ ಶ್ರಮವಿದೆ.

ಸಂತಾಪ: ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ದ.ಕ, ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್‌ಪಾಲ್ ಎ.ಸುವರ್ಣ, ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಎಂ. ಸಂತಾಪ ವ್ಯಕ್ತ ಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net