

ಮಧುಗಿರಿ : ಮುಂದಿನ 3 ವರ್ಷದೊಳಗೆ ತಾಲೂಕಿನ 1100 ಎಕರೆ ಪ್ರದೇಶದಲ್ಲಿ 85 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಜಿ.ಎಸ್.ಬಸವರಾಜು ಭರವಸೆ ನೀಡಿದರು.
ಪುರಸಭೆ ಸಭಾಂಗಣದಲ್ಲಿ ರಾಜ್ಯ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಮತ್ತು ತಾಲೂಕು ಆಡಳಿತದ ಸಹಯೋಗದಲ್ಲಿ ಮಂಗಳವಾರ ದಿನಸಿ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಮಧುಗಿರಿ ತಾಲೂಕು ಅತೀ ಹಿಂದುಳಿದಿದೆ. ಪ್ರತಿನಿತ್ಯ ಸಾವಿರಾರು ಕಾರ್ಮಿಕರು ಉದ್ಯೋಗ ಅರಸಿ ದೊಡ್ಡಬಳ್ಳಾಪುರ, ಬೆಂಗಳೂರು ಸೇರಿ ಸುತ್ತಮುತ್ತಲ ನಗರಗಳಿಗೆ ಕುಟುಂಬಗಳನ್ನು ತೊರೆದು ಹೋಗುತ್ತಿದ್ದಾರೆ. ಇದನ್ನು ಮನಗಂಡು ಇಡೀ ರಾಜ್ಯದಲ್ಲೇ ಜಿಲ್ಲೆಗೆ ನೀಡುವ ಜವಳಿ ಪಾರ್ಕ್ ಅನ್ನು ಮಧುಗಿರಿಗೆ ತರಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಯೋಜನೆಗೆ ಸ್ಥಳ ಗುರುತಿಸಿದ್ದು, ಕಾರ್ಯರೂಪಕ್ಕೆ ಬಂದಲ್ಲಿ ಸುಮಾರು 75 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ. ಅದರ ವಿವರ ಹೇಳಿ ಬಿಟ್ಟರೆ ಕೆಲವರು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಾರೆ ಎಂದರು.
ತಾಲೂಕಿನ ಜನತೆ ನನಗೆ ಅತೀ ಹೆಚ್ಚಿನ ಮತ ನೀಡಿ ಗೆಲ್ಲಿಸಿದ್ದು, ಎತ್ತಿನಹೊಳೆ ಯೋಜನೆಯ ಮೂಲಕ ತಾಲೂಕಿನ ಕೆರೆಗಳಿಗೆ 1.5 ಟಿಎಂಸಿ ನೀರು ಹರಿಯಲಿದೆ. ಇದರ ಜತೆಗೆ ಗೂಬಲಗುಟ್ಟೆ ಸಮೀಪ ಡ್ಯಾಂ ನಿರ್ಮಿಸಿ ವಿವಿಧ ಮೂಲಗಳಿಂದ 3 ಟಿಎಂಸಿ ನೀರು ತಂದು ಒಟ್ಟು 4.5 ಟಿಎಂಸಿ ನೀರು ಸಂಗ್ರಹಿಸಿ ಪುರವರ ಬಳಿ ಕೆರೆ ಅಗಲೀಕರಣಗೊಳಿಸಿ ಹರಿಸಿದಲ್ಲಿ ತಾಲೂಕಿನ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತವಾದ ಪರಿಹಾರ ದೊರೆಯಲಿದೆ. ಈ ಮೂಲಕ ಕ್ಷೇತ್ರದ ಜನತೆಯ ಋಣ ತೀರಿಸುತ್ತೇನೆ ಎಂದರು.
ಕೇಂದ್ರದ ತೋಟಗಾರಿಕೆ ಇಲಾಖೆ ಅಧಿಕಾರಿ ಶಿವಪ್ರಸಾದ್, ಉಪ ತಹಸೀಲ್ದಾರ್ ವರದರಾಜು, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹೆಬ್ಬಾಕ ರವಿ, ಪುರಸಭೆ ಸದಸ್ಯರಾದ ಲಾಲಾಪೇಟೆ ಮಂಜುನಾಥ್, ಸುಜಾತಾ, ನಟರಾಜು, ಆಸಿಯಾ ಬಾನು, ಮುಖಂಡರಾದ ಎಂ.ಎಸ್.ಶಂಕರ ನಾರಾಯಣ್, ಎಂ.ಜಿ.ಉಮೇಶ್, ಎಂ.ವಿ.ಮಂಜುನಾಥ್, ಎಂ.ಜಿ.ಶ್ರೀನಿವಾಸ ಮೂರ್ತಿ ಇತರರಿದ್ದರು.
ಶಾಸಕರು ಅಭಿವೃದ್ಧಿಗೆ ಸಹಕಾರ ನೀಡುತ್ತಿಲ್ಲ : ಮಧುಗಿರಿ ಕ್ಷೇತ್ರದ ಅಭಿವೃದ್ಧಿಗೆ ನನ್ನ ಮನಸ್ಸು ಮಿಡಿಯುತ್ತಿದೆ. ಆದರೆ ಸ್ಥಳೀಯರ ಶಾಸಕರು ಸಹಕಾರ ನೀಡುತ್ತಿಲ್ಲ ಎಂದು ಸಂಸದ ಬಸವರಾಜು ಆರೋಪಿಸಿದರು. ಪಿ.ಎಂ.ಜಿ.ಎಸ್.ವೈ.ಯೋಜನೆಯನ್ನು ತಾನೇ ತಂದಿದ್ದೇನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಸಲು ನಾನು ಬಹಳಷ್ಟು ಶ್ರಮ ವಹಿಸಿದ್ದು, ಹೇಮಾವತಿ ನೀರಿನ ಮೋಟರ್ ಪಂಪ್‌ಸೆಟ್ ಜಾಕ್ವೆಲ್ ಎಲ್ಲಿದೆ ಎಂಬುದೇ ಗೊತ್ತಿಲ್ಲದ ಇಲ್ಲಿನ ಶಾಸಕರು, ನನ್ನ ಮೇಲೆ ಪಂಪ್‌ಸೆಟ್ ಕಳುವು ಮಾಡಿಸಿರುವ ಆರೋಪ ಮಾಡುತ್ತಿದ್ದು, ಇವರು ಯಾರ ಸಹಕಾರದಿಂದ ಶಾಸಕರಾದರು ಎಂಬುದನ್ನು ಮೊದಲು ನೆನಪು ಮಾಡಿಕೊಳ್ಳಲಿ. ಮೋಟಾರ್ ಪಂಪ್‌ಸೆಟ್ ಕಳುವು ಮಾಡಿಸುವಷ್ಟು ಕೀಳುಮಟ್ಟದ ರಾಜಕೀಯ ಮಾಡುವುದು ನನಗೆ ಗೊತ್ತಿಲ್ಲ ಎಂದರು.
ಸ್ವಪಕ್ಷದ ತಾಲೂಕು ಅಧ್ಯಕ್ಷರನ್ನು ಟೀಕಿಸಿದ ಸಂಸದ : ಸ್ವಪಕ್ಷದ ತಾಲೂಕು ಬಿಜೆಪಿ ಅಧ್ಯಕ್ಷರನ್ನು ಸಂಸದ ಜಿ.ಎಸ್.ಬಸವರಾಜು ಟೀಕಿಸಿದ್ದು ಚರ್ಚೆಗೆ ಗ್ರಾಸವಾಗಿದೆ. ಮಧುಗಿರಿಯಲ್ಲಿ ಬಿಜೆಪಿ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ. ಕಾರ್ಯಕ್ರಮಕ್ಕೆ ಕೂಡಾ ಬಂದಿದ್ದಾರೆ. ಆದರೆ ತಾಲೂಕು ಅಧ್ಯಕ್ಷರು ಎಲ್ಲಿಗೆ ಹೋಗುತ್ತಾರೋ, ಬರುತ್ತಾರೊ ಗೊತ್ತ್ಲಿ. ನಾನು ಅವರನ್ನು ನೋಡಿಯೂ ಇ್ಲ. ಅವರದೇ ಮಾರ್ಗದಲ್ಲಿ ನಡೆಯುತ್ತಾರೆ. ಅವರ ಬಗ್ಗೆ ಟೀಕೆ ಮಾಡೋದ್ಲಿ ನಾನು. ಅವರನ್ನು ನೋಡಲೂ ಹೋಗುವುದ್ಲಿ ಎಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.
ಮಧುಗಿರಿ ಶಾಸಕರಿಗೆ ನನ್ನ ಬೆಂಬಲ ಪಡೆದು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಳ್ಳುವುದು ಗೊತ್ತಿಲ್ಲ. ಅಧಿಕಾರಿಗಳು ಎಂಎಲ್‌ಎ ಆದರೆ ಹೀಗೆ ಸುಳ್ಳು ಹೇಳಿಕೊಂಡು ಓಡಾಡುತ್ತಾರೆ. ಜಿ.ಎಸ್.ಬಸವರಾಜು, ಸಂಸದ