ಮತದಾನ ದಿಂದ ಮಾತ್ರ ಉತ್ತಮ ಪ್ರಜಾಪ್ರಭುತ್ವ

Javagal Srinath launches voter awareness campaign
ಮತದಾನ ಜಾಗೃತಿಯ ಪೋಸ್ಟರ್‌ನ್ನು ಜಾವಗಲ್ ಶ್ರೀನಾಥ್ ಬಿಡುಗಡೆ ಮಾಡಿದರು. ಡಾ.ಕೆ.ವಿ.ರಾಜೇಂದ್ರ, ಲಕ್ಷ್ಮೀಕಾಂತ್ ರೆಡ್ಡಿ, ಕೆ.ಎಂ.ಗಾಯತ್ರಿ, ಸೀಮಾ ಲಾಟ್ಕರ್ ಇತರರಿದ್ದರು.
Published on

ಮೈಸೂರು: ಮತದಾನ ದಿಂದ ಮಾತ್ರ ಉತ್ತಮ ಪ್ರಜಾಪ್ರಭುತ್ವ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟಿಗ ಹಾಗೂ ಜಿಲ್ಲೆಯ ಮತದಾನ ಜಾಗೃತಿ ರಾಯಭಾರಿ ಜಾವಗಲ್ ಶ್ರೀನಾಥ್ ಹೇಳಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಅರಮನೆ ಮುಂಭಾದದಲ್ಲಿ ಗುರುವಾರ ಆಯೋಜಿಸಿದ ಮತದಾನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮತದಾನ ನಮ್ಮ ಹಕ್ಕು. ಎಲ್ಲರೂ ಮತದಾನ ಮಾಡುವ ಮೂಲಕ ಉತ್ತಮ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಹೇಳಿದರು.

ಮತದಾನ ಮಾಡಿ ಪ್ರಜಾಪ್ರಭುತ್ವ ಉಳಿಸಿ

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ವಿಧಾನಸಭಾ ಚುನಾವಣೆಯಲ್ಲಿ ಪಾಲ್ಗೊಂಡು ಪ್ರತಿಯೊಬ್ಬ ಪ್ರಜೆ ಮತದಾನ ಮಾಡಬೇಕು. ಜಿಲ್ಲೆಯಲ್ಲಿ ಯುವ ಮತದಾರರ ಸಂಖ್ಯೆ ಹೆಚ್ಚಿದೆ. ಪ್ರತಿಯೊಬ್ಬ ಯುವ ಮತದಾರರು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿ. ಏಪ್ರಿಲ್ 1ಕ್ಕೆ 18 ವರ್ಷ ತುಂಬಿದ ಯುವಕ ಯುವತಿಯರಿಗೂ ಈ ಬಾರಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಪ್ರತಿಯೊಬ್ಬರೂ ಚುನಾವಣಾ ಪಟ್ಟಿಯನ್ನು ನೋಡಿಕೊಂಡು ಮತದಾನದಲ್ಲಿ ಪಾಲ್ಗೊಳ್ಳಿ ಎಂದು ತಿಳಿಸಿದರು.

ನಿಮಿಷಗಳಲ್ಲಿ ಪರಿಹಾರಕ್ಕೆ ಕ್ರಮ

ಮತದಾರರ ಪಟ್ಟಿಯಿಂದ ಹೆಸರು ಕೈ ಬಿಟ್ಟು ಹೋಗದಂತೆ ಮತ್ತು ಮರಣ ಹೊಂದಿದವರ ಪಟ್ಟಿಯ ಬಗ್ಗೆ ಗಮನಹರಿಸಬೇಕು. 80 ವರ್ಷ ಮೇಲ್ಪಟ್ಟಿದ್ದು ಮತಗಟ್ಟೆಗೆ ಬಂದು ಮತ ಹಾಕಲು ಸಾಧ್ಯವಾಗದವರಿಗೆ 12 ಡಿ ಮೂಲಕ ಮತದಾನ ಮಾಡಲು ಅವಕಾಶವಿದೆ. ಸಿ-ವ್ಹಿಜಿಲ್ ಆ್ಯಪ್ ಮೂಲಕ ಚುನಾವಣಾ ಸಂಬಂಧಿತ ದಾಖಲಾದ ದೂರುಗಳಿಗೆ ನೂರು ನಿಮಿಷಗಳಲ್ಲಿ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ.ಗಾಯತ್ರಿ, ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ವಿವಿಧ ಇಲಾಖೆಯ ಅಧಿಕಾರಿಗಳು, ಅಂಗವಿಕಲರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದೇ ವೇಳೆ ಮತದಾನ ಜಾಗೃತಿಯ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net