

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಅ. 1 ಮತ್ತು 2ರಂದು ಜರುಗುವ ಬಿಷ್ಠಾದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ಮತ್ತು ಪ್ರಾಣಿಗಳ ತೂರಾಟ, ಪ್ರಾಣಿಗಳ ಅಂಗಾಂಗ ನೈವೇದ್ಯ ಸಲ್ಲಿಕೆ ಮಾಡುವುದನ್ನು ತಡೆಯುವಂತೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಪಶು ಪ್ರಾಣಿಬಲಿ ನಿರ್ಮೂಲನ ಜಾಗೃತಿ ಮಹಾಸಂಘದ ಅಧ್ಯಕ್ಷ ದಯಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ಈ ಸಂಬಂಧ ಪೊಲೀಸ್ ಮಹಾನಿರ್ದೇಶಕರು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು, ಬೆಳಗಾವಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿರುವ ಅವರು, ದೇವಾಲಯದ ಮುಂಭಾಗ, ಸುತ್ತಮುತ್ತಲಿನ ಪರಿಸರ ಹಾಗೂ ರಸ್ತೆಯ ಇಕ್ಕೆಲ. ಹೊರವಲಯ ಸೇರಿದಂತೆ ಸಾರ್ವಜನಿಕ ಧಾರ್ಮಿಕ ಸಮಾವೇಶದಲ್ಲಿ ಪ್ರಾಣಿ ಬಲಿಯಾಗದಂತೆ 1959ರ ಕರ್ನಾಟಕ ಪ್ರಾಣಿಬಲಿಗಳ ಪ್ರತಿಬಂಧಕ ಅಧಿನಿಯಮ ಹಾಗೂ 1963 ಮತ್ತು 1975ರ ನಿಯಮಗಳ ಪ್ರಕಾರ ಮತ್ತು ರಾಜ್ಯ ಹೈಕೋರ್ಟ್ ಆದೇಶದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರಕ್ಕೂ ಮನವಿ ಮಾಡಿಕೊಂಡಿದ್ದಾರೆ.
ಪ್ರಾಣಿಬಲಿಯು ಅನಾಗರೀಕವು ಅಂಧಶ್ರದ್ಧೆಯೂ, ಪರಿಸರ ಮಾಲಿನ್ಯಕಾರಕ ಆಗಿದ್ದು ಇದು ಕಾನೂನು ಮತ್ತು ಧರ್ಮ ವಿರೋಧಿ.ಆದ್ದರಿಂದ ಭಕ್ತಾದಿಗಳು ಪ್ರಾಣಿಬಲಿ ತ್ಯಜಿಸಿ ಅಹಿಂಸಾತ್ಮಕವಾಗಿ ಸಾತ್ವಿಕ ಪೂಜೆ ಸಲ್ಲಿಸಬೇಕು ಎಂದು ಸ್ವಾಮೀಜಿ ಭಕ್ತರಲ್ಲಿ ವಿನಂತಿಸಿದ್ದಾರೆ.
ಸಂದೇಶ ಯಾತ್ರೆ ಆರಂಭ:
ಈ ಪ್ರಾಣಿಬಲಿ ತಡೆ ಕುರಿತು ಅಹಿಂಸಾ ಪ್ರಾಣಿ ದಯಾ ಅಧ್ಯಾತ್ಮ ಸಂದೇಶಯಾತ್ರೆಯನ್ನು ಕಕ್ಕೇರಿಯ ಜಾತ್ರಾ ಪರಿಸರದ ಸುತ್ತಮುತ್ತಲಿನ ಊರುಗಳಲ್ಲಿ ಸೋಮವಾರದಿಂದ ಆರಂಭಿಸಲಾಗಿದ್ದು, ಅ. 2ರವರೆಗೆ , ಖಾನಾಪುರ, ಬೆಳಗಾವಿ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಯಾತ್ರೆ ಸಂಚರಿಸಲಿದೆ ಎಂದು ಸ್ವಾಮೀಜಿ ಹೇಳಿದ್ದಾರೆ.