ಮಹದೇಶ್ವರಸ್ವಾಮಿ ಪಲ್ಲಕ್ಕಿ ಉತ್ಸವ

15 HRS 01
Published on

ಹಿರೀಸಾವೆ : ಹೋಬಳಿಯ ಮಾದಲಗೆರೆ ಗ್ರಾಮದ ಶ್ರೀ ಮಹದೇಶ್ವರಸ್ವಾಮಿ ಸನ್ನಿಧಿಯಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಗುರುವಾರ ರಾತ್ರಿ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ಮುಂಜನೇಯಿಂದಲೇ ಸ್ವಾಮಿಗೆ ವಿಶೇಷ ಅಭಿಷೇಕ ಹಾಗೂ ಅಲಂಕಾರದೊಂದಿಗೆ ಪೂಜಾ ಕೈಂಕರ್ಯಗಳು ಜರುಗಿದ್ದು, ಭಕ್ತರು ಹಣ್ಣು-ಕಾಯಿ ಅರ್ಪಿಸಿ, ಗಂಧ ಕರ್ಪೂರ ಬೆಳಗಿಸಿ ದರ್ಶನ ಪಡೆದು ಧನ್ಯತೆ ಮೆರೆದರು. ಉತ್ಸವ ಮೂರ್ತಿಯನ್ನು ಒಡವೆ ಹಾಗೂ ವಸ್ತ್ರಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಯಿತು. ಸಂಜೆ 7.30 ರಲ್ಲಿ ತೆರೆದ ವಾಹನದ ಮೇಲೆ ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ಪಲ್ಲಕ್ಕಿಯ ಮೇಲೆ ಶ್ರೀ ಮಹದೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಲಾಯಿತು. ಪ್ರಧಾನ ಅರ್ಚಕರು ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ದೊರೆಯಿತು. ಮಂಗಳವಾಧ್ಯದೊಂದಿಗೆ ಪಲ್ಲಕ್ಕಿ ಉತ್ಸವ ರಾಜಬೀದಿಯಲ್ಲಿ ಸಾಗಿತು. ಭಕ್ತರು ಈಡುಗಾಯಿ ಹಾಕಿ ಕರ್ಪೂರ ಹೊತ್ತಿಸಿ, ಸ್ವಾಮಿಗೆ ಜಯಕಾರ ಹಾಕಿದರು. ಉತ್ಸವದ ಮುಗಿದ ಬಳಿಕ ಮಹಾಮಂಗಳಾರತಿ ಬೆಳಗಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net