

ಬನ್ನೂರು: ಬನ್ನೂರಿನಲ್ಲಿ ಹೇಮಾದ್ರಂಭ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ಭಾನುವಾರ ಸಾವಿರಾರು ಭಕ್ತಗರ ಸಮ್ಮುಖದಲ್ಲಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ಮುಂಜಾನೆಯಿಂದಲೇ ಸುತ್ತಮುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವಾಲಯದಲ್ಲಿ ಪೂಜೆ ಸಮರ್ಪಿಸಿದರು. ಮುಂಜಾನೆ ದೇವಿಯ ತೀರ್ಥವನ್ನು ಹಾಕುವ ಮೂಲಕ ರಥ ಸಾಗುವ ಮಾರ್ಗವನ್ನು ಪರಿಶುದ್ಧ ಗೊಳಿಸಲಾಯಿತು. ನಂತರ ಬಣ್ಣಬಣ್ಣದ ಪತಾಕೆಯಿಂದ ಕಂಗೊಳಿಸುತ್ತಿದ್ದ ರಥಕ್ಕೆ ಕಳಸ, ದೇವಿಯ ಚಿನ್ನದ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.ನಂತರ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಚಪ್ಪಾಳೆ ತಟ್ಟಿ ಹರ್ಷವನ್ನು ವ್ಯಕ್ತಪಡಿಸಿ ಜಯಕಾರಗಳೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಿದರು. ದೇವಿಯ ಕರಗವನ್ನು ಹೊತ್ತ ಭಕ್ತರು ಹೆಬ್ಬರೆಯ ನಿನಾದಕ್ಕೆ ಹೆಜ್ಜೆಯನ್ನು ಹಾಕುತ್ತಿದ್ದರೆ, ಮತ್ತೊಂದೆಡೆ ಮಂಗಳವಾದ್ಯದ ನಾದ ಮೆರವಣಿಗೆಗೆ ಮೆರಗು ನೀಡಿತ್ತು. ರಥೋತ್ಸವದಲ್ಲಿ ಪಾಲ್ಗೊಂಡವರಿಗೆ ದಾಹವನ್ನು ತಣಿಸಲು ವಿವಿಧ ಸಂಘದ ವತಿಯಿಂದ ಮಜ್ಜಿಗೆ, ಪಾನಕವನ್ನು ಅಲ್ಲಲ್ಲಿ ವಿತರಿಸಲಾಗುತ್ತಿತ್ತು. ಬಸ್‌ನಿಲ್ದಾಣದ ಬಳಿಯಲ್ಲಿಯೂ ಹರಕೆ ಹೊತ್ತ ಭಕ್ತರು ಪಾನಕ ವಿತರಣೆ ಮಾಡಿದರು.
ಸಂಭ್ರಮ ತೆಪ್ಪೋತ್ಸವ ಇಂದು : ಸೋಮವಾರ ಮಾಕನಹಳ್ಳಿಯ ಹೆಗ್ಗೆರೆಯ ಕಾವೇರಿ ಹಿನ್ನೀರಿನಲ್ಲಿ ದೇವಿಯ ತೆಪ್ಪೋತ್ಸವ ಸಂಭ್ರಮದಿಂದ ನಡೆಯಲಿದೆ. ಬೀರನಹಳ್ಳಿ, ಹನುಮನಹಾಳು, ಭೂಗತಹಳ್ಳಿ ಗ್ರಾಮಗಳಿಗೂ ತೆಪ್ಪದಲ್ಲೇ ದೇವಿ ಉತ್ಸವ ಸಂಚರಿಸಲಿದೆ. ಆಯಾ ಗ್ರಾಮದ ಭಕ್ತರು ಪೂಜೆ ಸಮರ್ಪಣೆ ಸಲ್ಲಿಸಲಿದ್ದಾರೆ. ಗ್ರಾಮದ ರಸ್ತೆಗಳನ್ನು ಬಣ್ಣ ಬಣ್ಣದ ವಿದ್ಯುತ್‌ದೀಪಗಳಿಂದ ಅಲಂಕರಿಸಲಾಗಿದೆ.