ಸುಬ್ರಹ್ಮಣ್ಯಸ್ವಾಮಿ ಜಾತ್ರಾ ಸಿದ್ಧತಾ ಸಭೆ

9ark1
Published on

ಅರಕಲಗೂಡು : ತಾಲೂಕಿನ ರಾಮನಾಥಪುರದಲ್ಲಿ ಡಿ. 16ರಿಂದ ಒಂದು ತಿಂಗಳ ಕಾಲ ನಡೆಯುವ ಶ್ರೀ ಪ್ರಸನ್ನ ಸುಬ್ರಹ್ಮಣ್ಯಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ನಿತ್ಯ ದಾಸೋಹ ಕೈಗೊಳ್ಳಬೇಕು ಎಂದು ಶಾಸಕ ಎ. ಮಂಜು ಸೂಚನೆ ನೀಡಿದರು.
ದೇವಸ್ಥಾನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಲಕ್ಷಾಂತರ ಭಕ್ತರು ಬರುವ ದೇವಸ್ಥಾನದ ಆಡಳಿತವನ್ನು ಸರ್ಕಾರ ಮಠದ ಸುಪರ್ದಿಗೆ ನೀಡಿದೆ. ಭಕ್ತರಿಗೆ ಅನೂಕೂಲ ಕಲ್ಪಿಸುವಲ್ಲಿ ಹಿಂದುಳಿಯಬಾರದು. ಈ ನಿಟ್ಟಿನಲ್ಲಿ ದೇವಸ್ಥಾನ ಆಡಳಿತ ಮಂಡಳಿ ಕ್ರಿಯಾಶೀಲವಾಗಬೇಕು ಎಂದು ಪಾರುಪತ್ತೇದಾರ ರಮೇಶ್ ಭಟ್ ನೆಲ್ಲಿತೀರ್ಥ ಅವರಿಗೆ ಮಾರ್ಗದರ್ಶನ ನೀಡಿದರು.
ಜಾತ್ರೆಯಲ್ಲಿ ಸ್ವಚ್ಛತೆಗೆ ಒತ್ತು ನೀಡಬೇಕು. ಭಕ್ತರಿಗೆ ಮೂಲ ಸೌಕರ್ಯಗಳ ಕೊರತೆ ಉಂಟಾಗದಂತೆ ಅಧಿಕಾರಿಗಳು ನಿಗಾ ವಹಿಸಬೇಕು. ತಾತ್ಕಾಲಿಕವಾಗಿ ಶೌಚಗೃಹ ವ್ಯವಸ್ಥೆ ಮಾಡಿ ಕಲುಷಿತ ನೀರು ನದಿ ಸೇರದಂತೆ ನೋಡಿಕೊಳ್ಳಬೇಕು. ದೇವಸ್ಥಾನಗಳ ಮುಂಭಾಗ ಹಾಗೂ ರಸ್ತೆಯಲ್ಲಿ ಸಂಚಾರಕ್ಕೆ ತೊಂದರೆ ಆಗದಂತೆ ಅಂಗಡಿ, ಮುಂಗಟ್ಟು ವಹಿವಾಟಿಗೆ ಕ್ರಮ ವಹಿಸಬೇಕು. ಸ್ನಾನ ಘಟ್ಟಕ್ಕೆ ಹೋಗುವ ಮಾರ್ಗದಲ್ಲಿ ಹೈಮಾಸ್ಟ್ ದೀಪ ಅಳವಡಿಸಬೇಕು ಎಂದು ಪಿಡಿಒ ಕುಮಾರಸ್ವಾಮಿ ಅವರಿಗೆ ಸೂಚಿಸಿದರು.
ಬಸ್ ಸಂಚಾರ ಹೆಚ್ಚಿಸಿ: ಖಾಸಗಿ ಜಮೀನಿನಲ್ಲಿ ವಾಹನಗಳ ಪಾರ್ಕಿಂಗ್ ಸೌಲಭ್ಯ ಮಾಡಲಾಗಿದೆ. ವಿವಿಧ ಹಳ್ಳಿಗಳಿಂದ ಭಕ್ತರು ಆಗಮಿಸುವ ಕಾರಣ ಗ್ರಾಮಾಂತರ ಮಾರ್ಗಕ್ಕೆ ಬಸ್‌ಗಳ ಸಂಚಾರ ಹೆಚ್ಚಿಸಬೇಕು. ಬಸ್ ನಿಲ್ದಾಣದಲ್ಲಿ ಇನ್ನೆರಡು ದಿನದಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.
ಜಾತ್ರೆ ನಿಮತ್ತ ದೇಗುಲ ಮತ್ತು ಮಾರ್ಗಗಳಿಗೆ ರಾತ್ರಿ ವೇಳೆ ವಿದ್ಯುತ್ ದೀಪಾಲಂಕಾರ ಮಾಡಬೇಕು. ವಿದ್ಯುತ್ ಕೈಕೊಡದಂತೆ ಎಚ್ಚರಿಕೆ ವಹಿಸಬೇಕು ಎಂದು ಸೆಸ್ಕ್ ಇಂಜಿನಿಯರ್ ಪ್ರದೀಪ್ ಗೆ ಸೂಚಿಸಿದರು. ಜಾತ್ರೆಯಲ್ಲಿ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡು ಪೊಲೀಸರ ಗಸ್ತು ಹೆಚ್ಚಿಸಬೇಕು. ಭಕ್ತರ ಸುರಕ್ಷತೆ ಕಡೆಗೆ ಹೆಚ್ಚು ಗಮನ ಹರಿಸಬೇಕು ಎಂದು ಸಬ್ ಇನ್ಸ್‌ಪೆಕ್ಟರ್ ಶೋಭಾ ಅವರಿಗೆ ಸೂಚಿಸಿದರು.
ತುರ್ತು ಚಿಕಿತ್ಸೆಗಾಗಿ ಅಂಬುಲೆನ್ಸ್ ವ್ಯವಸ್ಥೆ ಸದಾ ಸಿದ್ಧವಾಗಿರಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹೆಚ್ಚಿನ ನಿಗಾ ವಹಿಸಬೇಕು ಎಂದು ವೈದ್ಯಾಧಿಕಾರಿ ಡಾ. ದಿವ್ಯಾ ಅವರಿಗೆ ತಿಳಿಸಿದರು. ಜಾತ್ರಾ ಮಹೋತ್ಸವದ ಯಶಸ್ಸಿಗೆ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕು ಎಂದು ಶಾಸಕ ಮಂಜು ಹೇಳಿದರು. ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಗ್ರಾಪಂ ಅಧ್ಯಕ್ಷೆ ಪವನ ಕುಮಾರಿ, ಉಪಾಧ್ಯಕ್ಷ ಮಾದೇಶ್, ಪಾರುಪತ್ತೇದಾರ ರಮೇಶ್ ಭಟ್ ನೆಲ್ಲಿತೀರ್ಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net