

ಬೈಲಕುಪ್ಪೆ: ಚಿಕ್ಕ ಹೊನ್ನೂರು ಗ್ರಾಮ ಸಮೀಪವಿರುವ ಹೊನ್ನೂರಪ್ಪನ ಬೆಟ್ಟದ ದೇವಾಲಯದಲ್ಲಿ ಮತ್ತು ಬೆಟ್ಟದ ಪಕ್ಕದಲ್ಲಿರುವ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಶನಿವಾರ ವಿಜೃಂಭಣೆಯಿಂದ ಜರುಗಿತು.
ಮುಂಜಾನೆಯಿಂದಲೇ ಬೆಟ್ಟದ ಮೇಲಿರುವ ದೇವಾಲಯವನ್ನು ಗ್ರಾಮಸ್ಥರು ಸ್ವಚ್ಛಗೊಳಿಸಿ ತಳಿರು ತೋರಣ, ಹೂವು, ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದರು. ಅರ್ಚಕ ವಿಠಲ ತಂಡದವರಿಂದ ಹೊನ್ನೂರಪ್ಪನ ವಿಗ್ರಹಕ್ಕೆ ಹಾಲುತುಪ್ಪ ನೈವೇದ್ಯ ಮಾಡಿ ವಿವಿಧ ಹೋಮಗಳನ್ನು ನಡೆಸಿ, ಮಹಾ ಮಂಗಳಾರತಿ ನೆರವೇರಿಸಿದರು. ಆಂಜನೇಯ ಸ್ವಾಮಿ ದೇವಾಲಯದಲ್ಲಿ ಅರ್ಚಕ ನಾಗೇಶ್ ನೇತೃತ್ವದಲ್ಲಿ ಪೂಜೆ ನೆರವೇರಿತು.
ಕಾರ್ತಿಕ ಮಾಸದ ಅಂಗವಾಗಿ ಅರ್ಚಕ ವಿಠಲ ಮತ್ತು ತಂಡದವರಿಂದ ವಾದ್ಯಗೋಷ್ಠಿಯೊಂದಿಗೆ ನವಗ್ರಹಗಳಿಗೆ ಪೂಜೆ ನೆರವೇರಿಸಿ, ವಿಗ್ರಹಗಳನ್ನು ವಾಹನದಲ್ಲಿ ಕುಳ್ಳಿರಿಸಿ ಚಿಕ್ಕಹೊನ್ನೂರು, ದೊಡ್ಡ ಹೊನ್ನೂರು, ಬೈಲಕುಪ್ಪೆ, ತಿರುಮಲಾಪುರದ ಮಾರ್ಗ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮೂಲ ಸ್ಥಾನವಾದ ಆಂಜನೇಯ ಸ್ವಾಮಿ ದೇವಾಲಯಕ್ಕೆ ತಂದು ವಿಶೇಷ ಪೂಜೆ ನಡೆಸಲಾಯಿತು, ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ಚಿಕ್ಕ ಹೊನ್ನೂರು ಗ್ರಾಮದ ಮುಖಂಡರಾದ ಮೈಕಲ್(ಬಾಬು), ಕುಮಾರ್, ಬೈರಪ್ಪ, ನಿಶಾಂತ್, ಶಿವಕಾಂತ, ಮಹದೇವ, ಮುತ್ತುರಾಜ್, ಈಶ್ವರ, ದಿರ್ಗೆಶಿ ಶಿವಣ್ಣ, ಸ್ವಾಮಿ, ಬೈಲಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಿಶಾರ್ ಅಹ್ಮದ್, ಪಿಡಿಒ ಬೋರೇಗೌಡ, ಸದಸ್ಯರಾದ ನವೀನ್‌ಕುಮಾರ್, ಹರೀಶ, ಮಾಜಿ ಸದಸ್ಯ ರಾಮು ಇತರರು ಇದ್ದರು.