

ಸೋಮವಾರಪೇಟೆ: ನೂರಾರು ವರ್ಷಗಳ ಇತಿಹಾಸವಿರುವ ಮತ್ತು ಚೋಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ಜಾತ್ರಾ ಮಹೋತ್ಸವವನ್ನು ಮುಂದಿನ ದಿನಗಳಲ್ಲಿ ಕೊಡಗಿನಲ್ಲಿಯೇ ಪ್ರಖ್ಯಾತ ಮಾಡುವ ಉದ್ದೇಶವಿದೆ ಎಂದು ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಕೆ.ಎಂ.ಲೋಕೇಶ್‌ಕುಮಾರ್ ಹೇಳಿದರು.
ಶಾಂತಳ್ಳಿಯ ಪ್ರಸಾದ ಕಲ್ಯಾಣ ಮಂಟಪದಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಶ್ರೀ ಕುಮಾರಲಿಂಗೇಶ್ವರಸ್ವಾಮಿಯ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈಗಾಗಲೇ ದೇವಾಲಯದ ವತಿಯಿಂದ 60 ಲಕ್ಷ ರೂ.ವೆಚ್ಚದಲ್ಲಿ ಕಲ್ಯಾಣ ಭವನವನ್ನು ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಜೂನ್ ಅಂತ್ಯದೊಳಗೆ ಲೋಕಾರ್ಪಣೆ ಮಾಡುವುದಾಗಿ ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ, ರಾಷ್ಟ್ರದ ಪ್ರಗತಿಯಲ್ಲಿ ಯುವಕರ ಪಾತ್ರ ಅಪಾರವಾದದು. ಯುವಶಕ್ತಿ ರಾಷ್ಟ್ರಕ್ಕೆ ಮತ್ತು ಸಮಾಜಕ್ಕೆ ಅತ್ಯಮೂಲ್ಯವಾದುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜಾತಿ, ವರ್ಗ, ಲಿಂಗಭೇದ ಮರೆತು ಕೆಲಸ ಮಾಡಬೇಕು. ಅಲ್ಲದೆ ರಾಜಕೀಯ ರಹಿತವಾಗಿ ಪ್ರತಿಯೊಬ್ಬರೂ ಪಾಲ್ಗೊಂಡು ನಮ್ಮ ಗ್ರಾಮದ ಜಾತ್ರೆಯನ್ನು ಯಶಸ್ವಿಗೊಳಿಸಿದ್ದಾರೆ ಎಂದು ಹೇಳಿದರು.
ಪಿಯುಸಿ ವಾಣಿಜ್ಯ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ತಲ್ತರೆಶೆಟ್ಟಳ್ಳಿಯ ಅನನ್ಯಾ ಅಶೋಕ್, ಕುಮಾರಳ್ಳಿ ಬಾಚಳ್ಳಿ ಗ್ರಾಮದ ಕೆಎಸ್‌ಆರ್‌ಟಿಸಿ ನಿವೃತ್ತ ಡಿಸಿಎಂ ಕೆ.ಎಂ.ರವೀಂದ್ರ, ಬೆಟ್ಟದಳ್ಳಿಯ ಶಾಲಾ ವಾಹನ ಚಾಲಕ ಬಿ.ಬಿ.ನವೀನ್, 35 ವರ್ಷಗಳ ಮೇಲ್ಪಟ್ಟ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಗಿರಿಜಾ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯಭಾಷಣಕಾರರಾಗಿ ಆಗಮಿಸಬೇಕಾಗಿದ್ದ ಪಶುವೈದ್ಯ ಶಾಲೆಯ ಸಹಾಯಕ ನಿರ್ದೇಶಕ ಡಾ.ಬದಾಮಿ ಅವರು ಇತ್ತೀಚೆಗೆ ಹೃದಯಾಘಾತದಿಂದ ಮರಣ ಹೊಂದಿದ ಹಿನ್ನೆಲೆಯಲ್ಲಿ ಸಮಾರಂಭದಲ್ಲಿ ಸಂತಾಪ ಸೂಚಿಸುವ ಮೂಲಕ ಗೌರವ ಸಲ್ಲಿಸಲಾಯಿತು.
ಧರ್ಮದರ್ಶಿ ಮಂಡಳಿ ಮಾಜಿ ಅಧ್ಯಕ್ಷ ಕೆ.ಎಸ್.ರಾಮಚಂದ್ರ, ಪ್ರಮುಖರಾದ ಕೆ.ಕೆ.ಸುಬ್ಬಯ್ಯ, ಕೆ.ಕೆ.ಗೋಪಾಲ, ಬಿ.ಈ.ಜಯೇಂದ್ರ, ಸವಿತಾ, ವಿಜಯಾ, ಕೆ.ಜಿ.ತಮ್ಮಯ್ಯ, ಕೆ.ಎಂ.ಧರ್ಮಪ್ಪ, ಜಿ.ಎಂ.ಸಜ್ಜನ್, ದೇವಾಲಯ ಸಮಿತಿ ಕಾರ್ಯದರ್ಶಿ ಕೆ.ಕೆ.ಮುತ್ತಣ್ಣ ಮತ್ತು ಪದಾಧಿಕಾರಿಗಳು ಇದ್ದರು.