

ವಿಜಯವಾಣಿ ಸುದ್ದಿಜಾಲ ಹುಕ್ಕೇರಿ
ಹಿರಿಯರು ರೂಢಿಸಿಕೊಂಡು ಬಂದಿರುವ ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳ ಕುರಿತು ಯುವ ಜನಾಂಗ ತಿಳಿದು ಮುಂದುವರೆಸಿಕೊಂಡು ಹೋಗಬೇಕು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.
ತಾಲೂಕಿನ ಬೆಳವಿ ಗ್ರಾಮದ ಸಂಗಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಜ್ಯ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಜಾತ್ರಾ ಕಮಿಟಿ ಪ್ರತಿವರ್ಷ ಜಾತ್ರಾ ಮಹೋತ್ಸವದಲ್ಲಿ ಹಲವಾರು ದೇಸಿ ಪಂದ್ಯಾವಳಿ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಕಮಿಟಿ ಸದಸ್ಯರ ಬೇಡಿಕೆಯಂತೆ ದೇವಸ್ಥಾನ ಅಭಿವೃದ್ಧಿಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಬೆಳವಿ ಸಿದ್ಧಾರೂಢಮಠದ ಮೃತ್ಯುಂಜಯ ಸ್ವಾಮೀಜಿ, ಕ್ಯಾರಗುಡ್ಡದ ಅಭಿನವ ಮಂಜುನಾಥ ಶ್ರೀಗಳು ಮಾತನಾಡಿ, ಮುಂಬರುವ ಸಂಗಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಇನ್ನಷ್ಟು ಧಾರ್ಮಿಕ ಕಾರ್ಯ ಆಯೋಜಿಸುವಂತೆ ಸಮಿತಿಯವರಿಗೆ ಸೂಚಿಸಿದರು.
ರಮೇಶ ಕತ್ತಿ ಅವರನ್ನು ಸತ್ಕರಿಸಲಾಯಿತು. ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ ಸೇರಿ ವಿವಿಧ ರಾಜ್ಯಗಳಿಂದ ಕುಸ್ತಿ ಪಟುಗಳು ಆಗಮಿಸಿದ್ದರು. ಕರ್ನಾಟಕ ಕೇಸರಿ ನಾಗೇಶ ಬಸಿಡೋಣಿ ವಿಜೇತರಾಗಿ ಬೆಳ್ಳಿ ಗದೆ ಸ್ವೀಕರಿಸಿದರು. ರಾಜು ನಾಯಿಕ, ಸುಭಾಷ ಮಗದುಮ್ಮ, ಪೇಸಪ್ಪ ಕಟ್ಟಿಮನಿ, ಶಂಕರ ಸಿಡ್ಲೆಪ್ಪಗೋಳ ಕುಸ್ತಿ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದರು.
ಮುಖಂಡರಾದ ದಿಲೀಪ್ ವಾಳಿಖಿಂಡಿ, ಕೆ.ಜಿ.ಪಾಟೀಲ, ಎಂ.ಬಿ. ನಾಯಿಕ, ಬೆಳವಿ ಪಿಕೆಪಿಎಸ್ ಅಧ್ಯಕ್ಷ ಲಿಂಗರಾಜ ನಾಯಿಕ, ಉಪಾಧ್ಯಕ್ಷ ಅಪ್ಪಾಸಾಹೇಬ ಸಾರಾಪೂರೆ, ಸಂಜೀವ ನಾಯಿಕ, ವಿಶ್ವನಾಥ ನಾಯಿಕ, ಸುಭಾಷ ಖಡಕಭಾಂವಿ, ಭೀಮಗೌಡ ಪಾಟೀಲ, ಕಲ್ಲಪ್ಪ ಕರ್ಕಿನಾಯಿಕ, ಸಂಜಯ ಚಿಕ್ಕೋಡಿ, ಹೀರಾ ಶುಗರ್ಸ್ ಎಂಡಿ ಎಸ್.ಆರ್.ಕರ್ಕಿನಾಯಿಕ, ಭೂಪಾಲ ಚಿನಗುಡಿ, ಕಾಡಪ್ಪ ವಾಲಿ, ಭಾಪು ಚಿನಗುಡಿ, ಭೀಮಣ್ಣ ಖೇಮಾಳಿ, ಶೇಖಯ್ಯ ಬಾದವಾನಮಠ, ಶಿವರುದ್ರಯ್ಯ ಮಠದ, ಅಪ್ಪಾಸಾಹೇಬ ಖಟಾವಕರ ಇತರರಿದ್ದರು.