ಸೋಂಪುರದಲ್ಲಿಂದು ಜಾತ್ರಾ ಮಹೋತ್ಸ

suggi jan 15 2020
Published on

ಬೆಂಗಳೂರು: ಶ್ರೀ ಬಸವೇಶ್ವರ ಭಕ್ತ ಮಂಡಳಿ ವತಿಯಿಂದ ಹೆಮ್ಮಿಗೆಪುರ ವಾರ್ಡ್ ವ್ಯಾಪ್ತಿಯ ಸೋಂಪುರ ನೈಸ್ ಸರ್ಕಲ್​ನಲ್ಲಿ ಬುಧವಾರ (ಜ.15) 11ನೇ ವರ್ಷದ ಕಡಲೆಕಾಯಿ ಪರಿಷೆಯೊಂದಿಗೆ ಶ್ರೀ ಗಿರಿಜಾ ಕಲ್ಯಾಣೋತ್ಸವ ಕಾರ್ಯ ಕ್ರಮಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಲಿದ್ದಾರೆ.

ಹಿಂದಿನ 10 ವರ್ಷಗಳಿಂದ ಪ್ರತಿ ಸಂಕ್ರಾಂತಿಯಂದು ಸೋಂಪುರ ಕಡಲೆಕಾಯಿ ಪರಿಷೆ ಹಾಗೂ ಜಾತ್ರಾಮಹೋತ್ಸವ ನಡೆದುಕೊಂಡು ಬಂದಿದೆ. ತಿಂಗಳುಗಟ್ಟಲೆ ನಡೆದ ಪೂರ್ವ ಸಿದ್ಧತೆ ಫಲವಾಗಿ ಜಾತ್ರಾಮಹೋತ್ಸವ ಕಳೆಕಟ್ಟಲಿದೆ. ಬೆಳಗ್ಗೆ 7ರಿಂದಲೇ ಅನ್ನದಾಸೋಹ ಆರಂಭವಾಗಲಿದೆ. ಜತೆಗೆ ಗಿಣ್ಣಿನಿಂದ ತಯಾರಿಸಿದ ಪ್ರಸಾದ ವಿಯೋಗ ನಡೆಯಲಿದೆ.

ಎಂ. ರುದ್ರೇಶ್ ಸಾರಥ್ಯ: ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ. ರುದ್ರೇಶ್ ಸಾರಥ್ಯದಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಕನಕಪುರ ದೇಗುಲ ಮಠದ

ಶ್ರೀ ಮುಮ್ಮಡಿ ನಿರ್ವಾಣ ಸ್ವಾಮಿಜಿ ಹಾಗೂ ಕನಕಪುರ ಮರಳೇಗವಿ ಮಠದ ಶ್ರೀ ಶಿವರುದ್ರ ಸ್ವಾಮೀಜಿ ಹಾಗೂ ಹರಗುರು ಚರಮೂರ್ತಿಗಳ ಸಾರಥ್ಯದಲ್ಲಿ ವಿಜಯೇಂದ್ರ ಯಡಿಯೂರಪ್ಪ ಕುಟುಂಬದ ಸದಸ್ಯರು ಶ್ರೀ ಗಿರಿಜಾ ಕಲ್ಯಾಣೋತ್ಸವ ನೆರವೇರಿಸಲಿದ್ದಾರೆ.

ವಿಶೇಷ ಆಹ್ವಾನಿತರು: ಮಾಜಿ ಸಚಿವ ರಾಮಚಂದ್ರಗೌಡ, ಶಾಸಕರಾದ ಎಂ. ಕೃಷ್ಣಪ್ಪ, ಎಸ್.ಆರ್.ವಿ ಶ್ವನಾಥ್, ಸತೀಶ್ ರೆಡ್ಡಿ, ಕುಮಾರ್ ಬಂಗಾರಪ್ಪ, ಗೋಪಾಲಯ್ಯ, ಬೈರತಿ ಬಸವರಾಜು, ಮುನಿರತ್ನ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಮೇಯರ್ ಎಂ. ಗೌತಮ್ುಮಾರ್, ಉಪ ಮೇಯರ್ ರಾಮಮೋಹನ್​ರಾಜ್, ನಗರ ಜಿಲ್ಲಾ ಪಂಚಾಯಡ್ ಅಧ್ಯಕ್ಷ ಮುನಿರಾಜು, ಬಿಬಿಎಂಪಿ ಸದಸ್ಯರಾದ ಆರ್ಯ ಶ್ರೀನಿವಾಸ್, ವಿ.ವಿ. ಸತ್ಯನಾರಾಯಣ, ಶಾರದಾ ಮುನಿರಾಜು, ರಾಜಣ್ಣ, ನಳಿನಿ ಮಂಜುನಾಥ್, ವೇಲುನಾಯ್ಕರ್, ಬೆಂಗಳೂರು ದಕ್ಷಿಣ ತಾಪಂ ಅಧ್ಯಕ್ಷೆ ಪುಷ್ಪಲತಾ ಪರಮಶಿವಯ್ಯ,

ಜಿಪಂ ಸದಸ್ಯ ಮರಿಸ್ವಾಮಿ, ಕುಸುಮಾ ಶಿವಮಾದು, ತಾವರೆಕೆರೆ ಜಿಪಂ ಸದಸ್ಯ ನರಸಿಂಹಮೂರ್ತಿ, ಹನುಮಂತಯ್ಯ, ರಶ್ಮಿ ಹನುಮಂತೇಗೌಡ, ಲಕ್ಷ್ಮೀ ಸುರೇಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಐತಿಹಾಸಿಕ ಹಿನ್ನೆಲೆ: ಶ್ರೀ ಬಸವೇಶ್ವರ ದೇವಸ್ಥಾನ ಚೋಳರ ಕಾಲದಲ್ಲಿ ನಿರ್ವಣವಾಗಿದೆ ಎನ್ನಲಾಗಿದೆ. ವಿನೂತನ ದೇಗುಲದಲ್ಲಿ ನಂದಿ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ. ಜಾನುವಾರುಗಳಲ್ಲಿ ಕಾಣಿಸಿಕೊಳ್ಳುವ ಕಾಲುಬಾಯಿ ರೋಗ ಮತ್ತಿತರ ಕಾಯಿಲೆಗಳು ವಾಸಿಯಾಗಲು ಇಲ್ಲಿ ಹರಕೆ ಹೊರುವುದು ದಶಕಗಳಿಂದ ನಡೆದುಕೊಂಡು ಬಂದಿರುವ ಪ್ರತೀತಿ. ಹರಕೆ ಹೊತ್ತರೆ ಶೀಘ್ರ ರೋಗ ಗುಣಮುಖವಾಗುತ್ತದೆ ಎಂಬ ಬಲವಾದ ನಂಬಿಕೆ ಭಕ್ತರಲ್ಲಿದೆ. ಸುತ್ತಮುತ್ತಲಿನ 100ಕ್ಕೂ ಹೆಚ್ಚು ಹಳ್ಳಿಗಳ ಆರಾಧ್ಯ ದೈವವೆನಿಸಿರುವ ಶ್ರೀ ಬಸವೇಶ್ವರ ಮೂರ್ತಿಗೆ ಗಿಣ್ಣು ಹಾಲಿನ ಅಭಿಷೇಕ ಇಲ್ಲಿನ ಮತ್ತೊಂದು ವಿಶೇಷ.

ರಾತ್ರಿ 10ರವರೆಗೆ ದಾಸೋಹ: ಬೆಳಗ್ಗೆ 7 ಗಂಟೆಗೆ ಆರಂಭಗೊಳ್ಳುವ ಅನ್ನ ದಾಸೋಹ ರಾತ್ರಿ 10 ಗಂಟೆವರೆಗೆ ನಡೆಯಲಿದೆ. ಇದಕ್ಕಾಗಿಯೇ ಭಕ್ತಮಂಡಲಿ ಸದಸ್ಯರು ಸಕಲ ಪೂರ್ವಸಿದ್ಧತೆ ನಡೆಸಿದ್ದಾರೆ. ಎಚ್. ಗೊಲ್ಲಹಳ್ಳಿ, ದೊಡ್ಡಬೆಲೆ, ಗೊಟ್ಟಿಗೆರೆಪಾಳ್ಯ, ವರಾಹಸಂದ್ರ, ಹೆಮ್ಮಿಗೆಪುರ, ಚನ್ನವೀರಯ್ಯನಪಾಳ್ಯ ಸೇರಿ ಹಲವು ಗ್ರಾಮಗಳ ಭಕ್ತರು ಪಾಲ್ಗೊಳ್ಳಲಿದ್ದಾರೆ.

ಸಿಎಂ ಯಡಿಯೂರಪ್ಪ ಭಾಗಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಗೃಹಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಡಿಸಿಎಂ ಸಿ.ಎನ್.ಅಶ್ವತ್ಥನಾರಾಯಣ, ಸಚಿವ ಆರ್.ಅಶೋಕ್, ಶಾಸಕ ಎಸ್.ಟಿ.ಸೋಮಶೇಕರ್, ಮಾಜಿ ಶಾಸಕ ಅಶೋಕ್​ಖೇಣಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಗಿರಿಜಾಕಲ್ಯಾಣೋತ್ಸವ

ಶಿವಗಂಗಾ ಡಾ.ಸೋಮಶೇಖರ್ ಹಾಗೂ 9 ಅರ್ಚಕರ ತಂಡ ಗಿರಿಜಾಕಲ್ಯಾಣೋತ್ಸವ ಪೌರೋಹಿತ್ಯ ವಹಿಸಿದೆ.ಸಂಕ್ರಾಂತಿಯಂದು ಶಿವಗಂಗೆಯ ಗಂಗೋತ್ಪತ್ತಿ ಯಿಂದ ಗಂಗೆ ತಂದು ಬೆಳಗ್ಗೆ 9 ಗಂಟೆ ವೇಳೆ ಪೂಜಾಕೈಂಕರ್ಯಗಳನ್ನು ಅರಂಭಿಸಲಿ ದ್ದಾರೆ. ಗಣಪತಿ ಹೋಮ, ಪುಣ್ಯಾಹ, ಸೇರಿ 11 ರಿಂದ 11.30 ರ ಅಭಿಜಿನ್ ಮುಹೂರ್ತದಲ್ಲಿ ಕನ್ಯಾದಾನ ಹಾಗೂ ಮಾಂಗಲ್ಯಧಾರಣೆ ನಡೆಯಲಿದೆ. 12 ಗಂಟೆಗೆ ಗಿರಿಜಾ ಕಲ್ಯಾಣೋತ್ಸವ ಸಂಪನ್ನಗೊಳ್ಳಲಿದೆ.

ಬೃಹತ್ ಪೆಂಡಾಲ್

ಅನ್ನದಾಸೋಹಕ್ಕೆ ಸಕಲ ಸಿದ್ಧ್ದೆ ನಡೆದಿದ್ದು ಬೃಹತ್ ಪೆಂಡಾಲ್ ಹಾಕಲಾಗಿದೆ. ಪೊಲೀಸ್ ಬಂದೋಬಸ್ತ್ ಇರಲಿದೆ. ತಮಿಳುನಾಡು ಆಂಧ್ರ ಸೇರಿ ವಿವಿಧೆಡೆೆಗಳಿಂದ ಮೂಟೆಗಟ್ಟಲೆ ಕಡಲೆಕಾಯಿ, ಕಬ್ಬು, ಅವರೆಕಾಯಿ ಜಮಾವಣೆಯಾಗಿದೆ. ಅನ್ನದಾಸೋಹಕ್ಕೆ ಅಡುಗೆ ಮನೆ ಸಿದ್ಧಗೊಂಡಿದೆ. ನೂರಾರು ಸ್ವಯಂ ಸೇವಕರು ಜಾತ್ರೆ ಉಸ್ತುವಾರಿ ನಿರತರಾಗಿದ್ದಾರೆ.

ಕಡಲೆಕಾಯಿ ಪರಿಷೆ, ಜಾತ್ರಾಮಹೋತ್ಸವದೊಂದಿಗೆ ಈ ಬಾರಿ ಗಿರಿಜಾಕಲ್ಯಾಣೋತ್ಸವ ನಡೆಯಲಿದೆ. ಸುಗ್ಗಿ ಸಂಭ್ರಮದ ಆಚರಣೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದೆ. ಜಾತ್ರೆಯಲ್ಲಿ ಪಾಲ್ಗೊಳ್ಳುವ ಜನರಿಗೆ ಯಾವುದೇ ಕುಂದುಕೊರತೆಯಾಗದಂತೆ ಮೂಲಸೌಲಭ್ಯಗಳೊಂದಿಗೆ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳಲಾಗಿದೆ. | ಎಂ.ರುದ್ರೇಶ್ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net