

ಮಡಿಕೇರಿ:
ಕಾವೇರಿ ಉಗಮಸ್ಥಾನ ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಈ ಬಾರಿ ಅ.17ರ ಹಗಲಿನಲ್ಲಿ ತೀರ್ಥೋದ್ಭವ ಸಂಭವಿಸುವುದರಿAದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದ್ದು ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡುವ ಮೂಲಕ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಹೇಳಿದರು. ಕಾವೇರಿ ತೀರ್ಥೋದ್ಭವ ಮತ್ತು ಜಾತ್ರೆ ಹಿನ್ನೆಲೆಯಲ್ಲಿ ಭಾಗಮಂಡಲದಲ್ಲಿ ಸೋಮವಾರ ಸಂಜೆ ಆಯೋಜಿಸದ್ದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾತ್ರೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಭಕ್ತರು, ಸಾರ್ವಜನಿಕರಿಂದ ಬರುವ ಸಲಹೆಗಳನ್ನು ಸ್ವೀಕರಿಸಿ ಅನುಷ್ಠಾನ ಮಾಡುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಹೇಳಿದರು. ಸಭೆಯ ಆರಂಭದಲ್ಲಿ ಮಾತನಾಡಿದ ಬಹುತೇಕರು ತೀರ್ಥೋದ್ಭವದ ದಿನ ಮದ್ಯ ಮತ್ತು ಮಾಂಸ ಮಾರಾಟ ಸಂಪೂರ್ಣ ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರೂ ಆದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, ಅ. 17ರಂದು ಕೊಡಗು ಜಿಲ್ಲೆಯಾದ್ಯಂತ ಮದ್ಯ ಮಾರಾಟ ನಿಷೇಧಿಸುವ ಕುರಿತು ಚಿಂತಿಸಲಾಗುವುದು ಎಂದರು. ಗ್ರಾ.ಪಂ. ಸದಸ್ಯ ಸತೀಶ್ ಮಾತನಾಡಿ ಗೊನೆ ಕಡಿಯುವ ದಿನದಿಂದ ಮಾಂಸ ಮಾರಾಟ ಹಾಗೂ ಹೊಟೇಲ್Uಳಲ್ಲಿ ಮಾಂಸ ಖಾದ್ಯ ತಯಾರಿಯನ್ನು ನಿರ್ಬಂಧಿಸಲಾಗುತ್ತದೆ ಎಂದು ತಿಳಿಸಿದರು.
ರಸ್ತೆ ದುರಸ್ತಿಗೆ ಒತ್ತಾಯ:
ಸಂಪೂರ್ಣ ಹದಗೆಟ್ಟಿರುವ ಮಡಿಕೇರಿ-ಭಾಗಮಂಡಲ ರಸ್ತೆ ದುರಸ್ತಿಗೆ ಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದರು. ನಾಗರಿಕ ಹೋರಾಟ ಸಮಿತಿಯ ಪ್ರಮುಖ ಕುದುಕುಳಿ ಭರತ್ ಮಾತನಾಡಿ, ಮಡಿಕೇರಿಯಿಂದ ಭಾಗಮಂಡಲ ತನಕ ರಸ್ತೆ ತೀವ್ರ ಹದಗೆಟ್ಟಿದೆ. ರಸ್ತೆ ಹೊಂಡಗಳನ್ನು ಕೇವಲ ಮುಚ್ಚುವುದರಿಂದ ಪ್ರಯೋಜನವಿಲ್ಲ. ವೈಜ್ಞಾನಿಕವಾಗಿ ಕಾಮಗಾರಿ ನಡೆಸಬೇಕು ಎಂದರು. ಎ.ಎಸ್. ಪೊನ್ನಣ್ಣ ಪ್ರತಿಕ್ರಿಯಿಸಿ, ಮಳೆ ಇರುವುದರಿಂದ ಟೆಂಡರ್ ನಡೆದರೂ ಕೆಲಸ ಪ್ರಾರಂಭಿಸದAತೆ ಸೂಚಿಸಿದ್ದೇನೆ. ಮಳೆ ಪೂರ್ಣ ಕಡಿಮೆಯಾದ ಮೇಲೆ ಗುಣಮಟ್ಟದ ರಸ್ತೆ ನಿರ್ಮಿಸಲಾಗುವುದು ಎಂದರು.
ಲೋಕೋಪಯೋಗಿ ಇಲಾಖೆ ಅಭಿಯಂತರ ಇಬ್ರಾಹಿಂ ಮಾತನಾಡಿ, ಗುಂಡಿ ಮುಚ್ಚುವ ಕೆಲಸ ಪ್ರಗತಿಯಲ್ಲಿದೆ. ವೈಜ್ಞಾನಿಕವಾಗಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಪೊಲೀಸ್ ಬಂದೋಬಸ್ಥ್:
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾತನಾಡಿ ಸಂಚಾರ ಹಾಗೂ ಜನದಟ್ಟಣೆ ಆಗದಂತೆ ವ್ಯವಸ್ಥೆ ಮಾಡಲಾಗುತ್ತದೆ. ಬ್ರಹ್ಮ ಕುಂಡಿಕೆ ಹಾಗೂ ದೇವಾಲಯ ಆವರಣದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗುವುದು. ಭದ್ರತಾ ದೃಷ್ಟಿಯಿಂದ ಹೆಚ್ಚಿನ ಸಿಸಿ ಕ್ಯಾಮರಗಳನ್ನು ಅಳವಡಿಸಲಾಗುತ್ತದೆ. ವ್ಯವಸ್ಥಿತವಾಗಿ ಪಾದಯಾತ್ರೆಗೆ ಅವಕಾಶ ಮಾಡಿಕೊಡಲಾಗುವುದು. ತೀರ್ಥ ತೆಗೆದುಕೊಂಡು ಹೋಗುವ ವಾಹನಕ್ಕೆ ಮಾತ್ರ ಪಾಸ್ ನೀಡಲಾಗುವುದು. ಜನರು ಕೂಡ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.
ಹೊಸೂರು ಸತೀಶ್ ಕುಮಾರ್ ಮಾತನಾಡಿ, ಈ ಬಾರಿ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ನಿರ್ದಿಷ್ಟ ಸಮಯ ನಿಗದಿಗೊಳಿಸಿ ತಲಕಾವೇರಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ಮಾಡಿಕೊಡಬೇಕೆಂದರು. ತಲಕಾವೇರಿ-ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮಾತನಾಡಿ, ತೀರ್ಥೋದ್ಭವಕ್ಕೂ 2 ಗಂಟೆ ಮೊದಲು ತಲಕಾವೇರಿಗೆ ತೆರಳುವ ವಾಹನಕ್ಕೆ ತಡೆಯೊಡ್ಡಬೇಕು. ಹಿರಿಯ ನಾಗರಿಕರಿಗೆ ಬಸ್ ಸಂಚಾರ ಸಾಧ್ಯವಾಗುವುದಿಲ್ಲ. ಅವರ ವಾಹನಗಳ ಸಂಚಾರಕ್ಕೆ ಅವಕಾಶ ಕೊಡಬೇಕು ಎಂದು ಹೇಳಿದರು.
ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಮಾತನಾಡಿ, ವಾರಾಂತ್ಯ, ರಜೆ ದಿನದಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತದೆ. ಈ ಸಂದರ್ಭ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಎಸ್.ಪಿ. ಒಂದು ತಿಂಗಳ ಕಾಲ ಪೊಲೀಸರನ್ನು ನಿಯೋಜಿಸಲಾಗುವುದು ಎಂದರು.
ಉಚಿತ ಬಸ್:
ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕ ಈರಸಪ್ಪ ಮಾತನಾಡಿ ಕಳೆದ ಬಾರಿ 15 ಉಚಿತ ಬಸ್ ವ್ಯವಸ್ಥೆ ಮಾಡಲಾಗಿತ್ತು. ಈ ಬಾರಿ ಹೆಚ್ಚಿನ ಬೇಡಿಕೆ ಇದ್ದು, ಒದಗಿಸಲಾಗುವುದು ಎಂದರು. ಪೊನ್ನಣ್ಣ ಮಾತನಾಡಿ 25 ಬಸ್‌ಗಳ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಪ್ರಯಾಣಿಕರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗುವುದು. ನಿಗಮಕ್ಕೆ ಹಣ ಸಂದಾಯ ಮಾಡಲಾಗುವುದು ಎಂದರು.
ಹೂಳೆತ್ತುವ ಕೆಲಸ:
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಮಾತನಾಡಿ ತಲಕಾವೇರಿ ಜಾತ್ರೆಗೆ ಕಳೆದ ವರ್ಷ 2 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಈ ಬಾರಿಯೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಂಕ್ರಿಟ್ ರಸ್ತೆ, ಚರಂಡಿ ದುರಸ್ತಿಗೂ ಕ್ರಮವಹಿಸಲಾಗುತ್ತದೆ. ತ್ರಿವೇಣಿ ಸಂಗಮದಲ್ಲಿ ಹೂಳೆತ್ತುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
ಕೊಡಗು ಏಕೀಕರಣ ರಂಗದ ಪ್ರಮೋದ್ ಮಾತನಾಡಿ, ಕಾರುಗುಂದದಲ್ಲಿ ಅಪಘಾತ ಆಗುವ ತಿರುವಿದ್ದು, ಈ ಬಗ್ಗೆ ದೂರು ನೀಡಿದರೂ ಯಾವುದೇ ಸ್ಪಂದನ ದೊರೆತ್ತಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು. ಸೂರ್ತಲೆ ಸೋಮಣ್ಣ ಮಾತನಾಡಿ, ಭಾಗಮಂಡಲ-ಮಡಿಕೇರಿ ರಸ್ತೆಯನ್ನು ಶಾಶ್ವತವಾಗಿ ದುರಸ್ತಿ ಪಡಿಸಬೇಕು. ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸಬೇಕೆಂದರು.
ಬೇಕಲ್ ರಮಾನಾಥ್ ಮಾತನಾಡಿ, ರಾಜ್ಯದ ಬೇರೆ ದೇವಾಲಯಗಳ ರಸ್ತೆ ಸುಸಜ್ಜಿತವಾಗಿದೆ. ಆದರೆ, ಇಡೀ ರಾಜ್ಯಕ್ಕೆ ನೀರುಣಿಸುವ ತಲಕಾವೇರಿಗೆ ತೆರಳುವ ರಸ್ತೆಯ ಬಗ್ಗೆ ಮಲತಾಯಿ ಧೋರಣೆಯಾಗುತ್ತಿದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ಮಾತನಾಡಿ, ಆ್ಯಂಬುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗುವುದು. ವ್ಹೀಲ್ ಚೇರ್‌ಗಳ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಮಾತನಾಡಿ, ಸ್ಥಳೀಯ ಕಲಾವಿದರೊಂದಿಗೆ ಅಕಾಡೆಮಿಯನ್ನು ಸೇರಿಸಿಕೊಂಡು ಸಂಸ್ಕೃತಿ ಬಿಂಬಿಸುವ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.
ಭಾಗಮಂಡಲ, ತಲಕಾವೇರಿಯಲ್ಲಿ ಒಂದು ತಿಂಗಳ ಕಾಲ ಉಚಿತ ವಾಹನ ನಿಲುಗಡೆಗೆ ಅವಕಾಶ ಕೊಡುವಂತೆ ಸಾರ್ವಜನಿಕರು ಮನವಿ ಮಾಡಿದರು. ಆದರೆ ಈಗಾಗಲೇ ಟೆಂಡರ್ ಆಗಿರುವ ಹಿನ್ನೆಲೆಯಲ್ಲಿ ಮೂರು ದಿನ ಉಚಿತವಾಗಿ ವಾಹನ ನಿಲುಗಡೆಗೆ ನಿರ್ಧಾರ ಕೈಗೊಳ್ಳಲಾಯಿತು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಭಾಗಮಂಡಲ ಗ್ರಾ.ಪಂ. ಉಪಾಧ್ಯಕ್ಷೆ ಗಂಗಮ್ಮ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ, ಉಪವಿಭಾಗಾಧಿಕಾರಿ ನಿತೀಶ್, ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಶೇಖರ್, ತಹಸೀಲ್ದಾರ್ ಶ್ರೀಧರ್ ಸಭೆಯಲ್ಲಿ ಇದ್ದರು.