ದೇವರಾಯನದುರ್ಗದಲ್ಲಿ ವಿಜೃಂಭಣೆಯ ಬ್ರಹ್ಮರಥೋತ್ಸವ ;  ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮತ್ತಿತರರು ಭಾಗಿ

Devarayaadurga (2)
Published on

ತುಮಕೂರು : ಇತಿಹಾಸ ಪ್ರಸಿದ್ಧ ಕರಿಗಿರಿ ಕ್ಷೇತ್ರ ದೇವರಾಯನದುರ್ಗದ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಗುರುವಾರ ವೈಭವದಿಂದ ನೆರವೇರಿತು. ನಾಡಿನ ವಿವಿಧೆಡೆಗಳಲ್ಲಿ ಬಂದಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.

ಗುರುವಾರ ಮಧ್ಯಾಹ್ನ 1ಕ್ಕೆ ಪುಬ್ಬಾ ನಕ್ಷತ್ರದಲ್ಲಿ ಭಕ್ತರ ಜಯೋಷದ ನಡುವೆ ಗರುಡವು ರಥವನ್ನು ಪ್ರದಕ್ಷಿಣೆ ಹಾಕಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥಕ್ಕೆ ಹೂವು, ಧವನ ಅರ್ಪಿಸಿ, ಜಯಘೋಷ ಮೊಳಗಿಸಿದರು. ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ತಹಸೀಲ್ದಾರ್ ಮೋಹನ್‌ಕುಮಾರ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಟಿ.ಸುನೀಲ್‌ಕುಮಾರ್ ನರಸಿಂಹ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ರಥೋತ್ಸವದ ಅಂಗವಾಗಿ ಗುರುವಾರ ಮುಂಜಾನೆಯಿಂದಲೇ ವಿವಿಧ ಪೂಜಾ, ಕೈಂಕರ್ಯಗಳು ನಡೆದವು. ನರಸಿಂಹಸ್ವಾಮಿಗೆ ಅಭಿಷೇಕ ಮಾಡಲಾಯಿತು. ದೇವರು ಮತ್ತು ರಥಕ್ಕೆ ವಿವಿಧ ಬಗೆಯ ಹೂವುಗಳಿಂದ ವಿಶೇಷ ಅಲಂಕಾರ ಮಾಡಲಾಗಿತ್ತು.

ಬೆಳಗ್ಗೆ 7ರಿಂದಲೇ ನರಸಿಂಹಸ್ವಾಮಿ ಗ್ರಾಮಸ್ಥರ ಭಕ್ತರ ಮನೆಗಳಿಗೆ ತೆರಳಿತ್ತು. ಮಧ್ಯಾಹ್ನ 1ಕ್ಕೆ ದೇವರನ್ನು ರಥಕ್ಕೆ ಕೂರಿಸಿ, ಮೆರವಣಿಗೆ ಮಾಡಲಾಯಿತು. ರಥದ ಚಲಿಸುತ್ತಿದ್ದಂತೆ ನೆರೆದಿದ್ದ ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು. ಭಕ್ತರು ರಥಕ್ಕೆ ಹೂವು, ಬಾಳೆಹಣ್ಣು, ದವನ ಎಸೆದು ಹರಕೆ ತೀರಿಸಿದರು.

ರಥೋತ್ಸವದಲ್ಲಿ ಪಾಲ್ಗೊಳ್ಳಲು ಬಂದ ಭಕ್ತಾದಿಗಳಿಗೆ ಅಲ್ಲಲ್ಲಿ ಕೊಪ್ಪಲು ಹಾಕಿಕೊಂಡಿದ್ದ ಭಕ್ತರು ಪಾನಕ, ಮಜ್ಜಿಗೆ ನೀಡಿದರು. ದೇವಾಲಯದ ವತಿಯಿಂದಲೂ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net