

ನಂಜನಗೂಡು: ಇತಿಹಾಸ ಪ್ರಸಿದ್ಧ ಕಾರ್ಯ ಶ್ರೀ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಅ.23 ರಂದು ವಿಜೃಂಭಣೆಯಿಂದ ನಡೆಯಲಿದೆ.
ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಹೋಬಳಿಯ ಕಾರ್ಯ ಗ್ರಾಮದಲ್ಲಿ ದೀಪಾವಳಿ ಹಬ್ಬದ ಮಾರನೇ ದಿನ ಪ್ರಾರಂಭವಾಗುವ ಶ್ರೀ ಸಿದ್ದೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ಸುಮಾರು ಮೂರು ದಿನಗಳ ಕಾಲ ನಡೆಯಲಿದೆ.
ಅ.23ರಂದು ಬೆಳಗ್ಗೆ 9 ಗಂಟೆಗೆ ಶ್ರೀ ಸಿದ್ದೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವ ಗ್ರಾಮದಿಂದ ಬೆಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ನಂತರ ಸುಮಾರು 25 ಅಡಿ ಎತ್ತರದ ಖುರ್ಜು (ತೇರು) ತಯಾರು ಮಾಡಿ ವಸ್ತ್ರಾಲಂಕಾರ, ಹೂವಿನ ಅಲಂಕಾರಗಳಿಂದ ತೇರನ್ನು ಸಿಂಗರಿಸಿ ಕಳಸರೋಹಣ ಮಾಡಿ ಮಧ್ಯಾಹ್ನ 12 ಗಂಟೆಗೆ ಕಾರ್ಯ ಗ್ರಾಮದ ಕೊನೆಯ ಭಾಗದವರೆಗೂ ರಥವನ್ನು ಎಳೆದಯಲಾಗುತ್ತದೆ. ನಂತರ ಎರಡು ಟನ್ ಭಾರವುಳ್ಳ ತೇರನ್ನು ಸುಮಾರು 200ಕ್ಕೂ ಹೆಚ್ಚು ಜನರು ಹೆಗಲ ಮೇಲೆ ಹೊತ್ತು ಸುಮಾರು 600 ಅಡಿ ಎತ್ತರದ ಶ್ರೀ ಸಿದ್ದೇಶ್ವರ ಬೆಟ್ಟಕ್ಕೆ ಹೋಗುತ್ತಾರೆ.
ಅದನ್ನು ವೀಕ್ಷಿಸಲು ಲಕ್ಷಾಂತರ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಆಗಮಿಸುತ್ತಾರೆ. ಅ.24ರಂದು ಶುಕ್ರವಾರ ಪಲ್ಲಕ್ಕಿ ಉತ್ಸವ, ಪಂಚ ದೇವರ ಉತ್ಸವ ಮೂರ್ತಿಗಳ ಮೆರವಣಿಗೆ ಗ್ರಾಮದಲ್ಲಿ ನಡೆಯಲಿದೆ. ಅ.25 ರಂದು ಶನಿವಾರ ಗ್ರಾಮದ ದರೋಬರೋ ಕೆರೆಯಲ್ಲಿ ಶ್ರೀ ಸ್ವಾಮಿಯ ತೆಪ್ಪೋತ್ಸವ ಜರುಗಲಿದೆ. ಅ.30 ರಂದು ಶ್ರೀ ಸಿದ್ದೇಶ್ವರ ಸ್ವಾಮಿ ಬೆಟ್ಟದಲ್ಲಿ ಚಿಕ್ಕ ಜಾತ್ರಾ ಮಹೋತ್ಸವ ನಡೆಸಲಾಗುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಗ್ರಾಮಸ್ಥರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.