

ಮಡಿಕೇರಿ:
ಮಾತೆ ಕಾವೇರಿಯ ಭಕ್ತರು ಕಾತುರದಿಂದ ಕಾಯುತ್ತಿರುವ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಶುರುವಾಗಿದೆ. ಆಗಾಗ್ಗೆ ದರ್ಶನ ಕೊಡುತ್ತಿರುವ ಮಳೆ ಮಧ್ಯೆಯೇ ಶ್ರೀ ಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಭರದ ಸಿದ್ಧತೆ ನಡೆದಿದೆ. ಈ ಬಾರಿ ಹಗಲಿನ ಹೊತ್ತಿನಲ್ಲಿ ತೀರ್ಥೋದ್ಭವ ಸಂಭವಿಸುತ್ತಿರುವುದರಿAದ ಭಾರಿ ಸಂಖ್ಯೆಯಲ್ಲಿ ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲತೆಗಾಗಿ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯಲ್ಲಿ ಈ ಬಾರಿ ಕಾವೇರಿ ತೀರ್ಥೋದ್ಭವ ಶುಕ್ರವಾರ (ಅ.17) ಮಧ್ಯಾಹ್ನ 1.44ರ ಮಕರ ಲಗ್ನದಲ್ಲಿ ನಡೆಯಲಿದೆ. ತೀರ್ಥೋದ್ಭವದ ನಂತರ ಒಂದು ತಿಂಗಳು ಕಾಲ ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲಿ ಜಾತ್ರೆಯ ಸಂಭ್ರಮ ಇರುತ್ತದೆ. ಹಾಗಾಗಿ ಕಾವೇರಿ ತೀರ್ಥೋದ್ಭವದ ಸಂದರ್ಭಕ್ಕೆ ವಿಶೇಷ ಮಹತ್ವ ಕೊಡಲಾಗುತ್ತದೆ.
ಕೊಡಗಿನವರ ಪ್ರಮುಖ ಹಬ್ಬಗಳಲ್ಲಿ ಕಾವೇರಿ ಸಂಕ್ರಮಣವೂ ಒಂದು. ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ತೀರ್ಥೋದ್ಭವದ ನಂತರ ಈ ಹಬ್ಬ ಆಚರಿಸಲಾಗುತ್ತದೆ. ಗಂಗಾ ನದಿ ಕಾವೇರಿಯೊಂದಿಗೆ ಸೇರಿಕೊಳ್ಳುವ ಸಂದಭÀðದಲ್ಲಿ ತೀರ್ಥೋದ್ಭವ ಸಂಭವಿಸುತ್ತದೆ ಎನ್ನುವುದು ಆಸ್ತಿಕರ ನಂಬಿಕೆ.
ನಂತರದ ಒಂದು ತಿಂಗಳಲ್ಲಿ ಶ್ರೀ ಕ್ಷೇತ್ರ ಭಾಗಮಂಡಲದ ತ್ರಿವೇಣಿ ಸಂಗಮ ಮತ್ತು ತಲಕಾವೇರಿಯ ಪವಿತ್ರ ಕೊಳದಲ್ಲಿ ತೀರ್ಥ ಸ್ನಾನ ಮಾಡುವುದರಿಂದ ಗಂಗೆಯಲ್ಲಿ ಮಿಂದಷ್ಟೇ ಪುಣ್ಯ ಬರುತ್ತದೆ ಎನ್ನುವ ಪ್ರತೀತಿ ಇದೆ.
ತೀರ್ಥೋದ್ಭವ ಸಂದರ್ಭದಲ್ಲಿ ಮಾತೆ ಕಾವೇರಿ ತೀರ್ಥರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಡುತ್ತಾಳೆ ಎನ್ನುವ ನಂಬಿಕೆಯೂ ಇದೆ. ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ತೀರ್ಥೋದ್ಭವ ದಿನ ಮತ್ತು ನಂತರದ ಜಾತ್ರೆಯ ಒಂದು ತಿಂಗಳಲ್ಲಿ ಪಿಂಡ ಪ್ರದಾನ ಮಾಡುವುದರಿಂದ ಅವರ ಆತ್ಮಕ್ಕೆ ಮೋಕ್ಷ ಸಿಗುತ್ತದೆ ಎನ್ನುವ ಭಾವನೆ ಇರುವದರಿಂದ ವಿವಿಧ ಕಾರಣಕ್ಕೆ ಬೇರೆ ಬೇರೆ ಕಡೆ ನೆಲೆಸಿರುವ ಕೊಡಗು ಮೂಲದವರು ತುಲಾಸಂಕ್ರಮಣ ಜಾತ್ರೆಯ ಅವಧಿಯಲ್ಲಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಪಿಂಡ ಪ್ರದಾನ ಮಾಡಿಸುತ್ತಾರೆ.
ತೀರ್ಥೋದ್ಭವದ ಸಂದಭÀðದಲ್ಲಿ ಕೊಡಗು ಮಾತ್ರವಲ್ಲದೆ ರಾಜ್ಯ ಮತ್ತು ಹೊರ ರಾಜ್ಯದಿಂದಲೂ ಭಕ್ತರು ಭಾಗಮಂಡಲ, ತಲಕಾವೇರಿಗೆ ಬರುತ್ತಾರೆ. ಈ ಬಾರಿಯ ತೀರ್ಥೋದ್ಭವದ ಮುಹೂರ್ತ ಮಧ್ಯಾಹ್ನದ ವೇಳೆ ಬಂದಿರುವುದು ವಿಶೇಷ. ಶುಕ್ರವಾರ (ಅ.17) ಮಧ್ಯಾಹ್ನ 1.44ರ ವೇಳೆಯಲ್ಲಿ ತೀಥೋದ್ಭವ ಸಂಭವಿಸುತ್ತಿರುವುದರಿAದ ಶ್ರೀ ಕ್ಷೇತ್ರದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಹಾಗಾಗಿ ಭಕ್ತರಿಗೆ ಯಾವುದೇ ಅನಾನುಕೂಲ ಆಗದಂತೆ ಭಾಗಮಂಡಲ-ತಲಕಾವೇರಿ ದೇವಾಲಯ ಸಮಿತಿ, ಸ್ಥಳೀಯ ಗ್ರಾಮ ಪಂಚಾಯಿತಿ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ.
ವಾಹನ ನಿಲುಗಡೆ, ಕುಡಿಯುವ ನೀರು, ಶೌಚಾಲಯ ಸೇರಿ ಮೂಲಭೂತ ಸೌಲಭ್ಯ ಕಲ್ಪಿಸುವುದು, ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ವ್ಯವಸ್ಥೆ, ಭಾಗಮಂಡಲದಿAದ ತಲಕಾವೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಶುಚಿಗೊಳಿಸುವುದು, ರಸ್ತೆ ಬದಿಯ ಕುರುಚಲು ಗಿಡಗಳನ್ನು ತೆರವು ಮಾಡುವುದು ಸೇರಿದಂತೆ ಅಗತ್ಯ ಕೆಲಸಗಳು ಚುರುಕಾಗಿ ನಡೆಯುತ್ತಿದೆ. ಗುರುವಾರ ರಾತ್ರಿಯೇ ಭಕ್ತರು ಜಮಾವಣೆಗೊಳ್ಳುವ ಸಾಧ್ಯತೆ ಇರುವುದರಿಂದ ಅಗತ್ಯ ಇರುವ ಕಡೆಗಳಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಮಾಡಲಾಗುತ್ತಿದೆ.
ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಈಗಾಗಲೇ ಶಾಶ್ವತ ಸಿ.ಸಿ.ಟಿ.ವಿ ಅಳವಡಿಸಲಾಗಿದೆ. ಧ್ವನಿವರ್ಧಕದ ವ್ಯವಸ್ಥೆಯೂ ಇದೆ. ತೀರ್ಥೊದ್ಭವ ಸಂದಭÀðದಲ್ಲಿ ಅನಗತ್ಯ ಗೊಂದಲ ಮತ್ತು ನೂಕುನುಗ್ಗಲು ತಪ್ಪಿಸುವ ಉz್ದೆÃಶದಿಂದ ತೀರ್ಥ ವಿತರಣೆಯನ್ನು ಶಿಸ್ತುಬದ್ಧಗೊಳಿಸಲು ಕೂಡ ಯೋಜನೆ ರೂಪಿಸಲಾಗಿದೆ. ಬ್ರಹ್ಮಕುಂಡಿಕೆ ಮತ್ತು ಸ್ನಾನದ ಕೊಳದ ಬಳಿ ತೀರ್ಥೋದ್ಭವ ವೇಳೆ ತಳ್ಳಾಟ ಉಂಟಾಗುವುದನ್ನು ತಡೆಯಲು ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಜಾತ್ರೆಯ ಅವಧಿಯಲ್ಲಿ ತಲಕಾವೇರಿಯಲ್ಲಿ ಭಕ್ತರಿಗೆ ಅನ್ನದಾನದ ವ್ಯವಸ್ಥೆಯೂ ಇರಲಿದೆ.
ತೀರ್ಥೋದ್ಭವ ಹಿನ್ನೆಲೆಯಲ್ಲಿ ತಲಕಾವೇರಿ ಮತ್ತು ಭಾಗಮಂಡಲದಲ್ಲಿ ವಿಶೇಷ ಪೂಜಾ ವಿದಿ-ವಿಧಾನಗಳು ಮುಂಚಿತವಾಗಿ ಆರಂಭವಾಗಲಿದೆ. ಭಾಗಮಂಡಲ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಅ.17ರ ಮುಂಜಾನೆ 4 ಗಂಟೆಯಿAದ ಪೂಜೆಗಳು ಶುರುವಾಗಲಿದೆ. ತಲಕಾವೇರಿಯಲ್ಲೂ ಬ್ರಾಹ್ಮಿ ಮುಹೂರ್ತದಲ್ಲಿ ಆರಂಭವಾಗುವ ಪೂಜೆ ಪುನಸ್ಕಾರಗಳು ಸಂಜೆ 6 ಗಂಟೆ ತನಕವೂ ಮುಂದುವರಿಯಲಿದೆ. ತೀರ್ಥೋದ್ಭವ ನಂತರ ತೀರ್ಥ ವಿತರಣೆ ಇರಲಿದೆ. ಭಾಗಮಂಡಲದಲ್ಲಿ ಪಿಂಡ ಪ್ರದಾನಕ್ಕೆ ಅವಕಾಶ ಕೊಡಲಾಗುತ್ತಿದೆ.
ತುಲಾಸಂಕ್ರಮಣ ಜಾತ್ರೆಯ ಸಿದ್ಧತೆಗಳು ಈ ವರ್ಷವೂ ಅಧಿಕಾರಿಗಳ ಮೇಲ್ವೀಚಾರಣೆಯಲ್ಲಿ ನಡೆಯುತ್ತಿದೆ. ಸಾಮಾನ್ಯವಾಗಿ ಪ್ರತಿ ವರ್ಷ ಭಾಗಮಂಡಲ-ತಲಕಾವೇರಿ ದೇವಾಲಯ ವ್ಯವಸ್ಥಾಪನಾ ಸಮಿತಿ ಮೇಲ್ವಿಚಾರಣೆಯಲ್ಲಿ ಸಿದ್ಧತೆಗಳು ಆಗುತ್ತಿದ್ದವು. ಆದರೆ ಈ ಸಮಿತಿ ಈ ವರ್ಷವೂ ರಚನೆ ಆಗದ ಕಾರಣ ವ್ಯವಸ್ಥಾಪನಾ ಸಮಿತಿ ಇಲ್ಲದ 3ನೇ ಜಾತ್ರೆ ಇದಾಗಿದೆ. ಹಾಗಾಗಿ ಸಿದ್ಧತೆಯ ಮೇಲ್ವಿಚಾರಣೆ ಜಿಲ್ಲಾಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿ ನಡೆಸುತ್ತಿದ್ದಾರೆ. ಈ ಬಾರಿ ತಲಕಾವೇರಿ ಜಾತ್ರೆ ಸಿದ್ಧತೆಗಾಗಿ ಕಾವೇರಿ ನೀರಾವರಿ ನಿಗಮ ಮೂಲಕ 2 ಕೋಟಿ ರೂ. ಮತ್ತು ಮುಜರಾಯಿ ಇಲಾಖೆ ಮೂಲಕ 75 ಲಕ್ಷ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ.
ಶ್ರೀ ಕಾವೇರಿ ತೀರ್ಥೋದ್ಭವ ಜಾತ್ರೆ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರದಲ್ಲಿ ಈಗಾಗಲೇ ಧಾರ್ಮಿಕ ಕಾರ್ಯಕ್ರಮಗಳು ಶುರುವಾಗಿದೆ. ಪತ್ತಾಯಕ್ಕೆ ಅಕ್ಕಿ ಹಾಕುವುದು,ಆಜ್ಞಾ ಮುಹೂರ್ತ, ಅಕ್ಷಯ ಪಾತ್ರೆ ಇರಿಸುವುದು, ಕಾಣಿಕೆ ಡಬ್ಬಿಗಳನ್ನು ಇಡುವುದು ಮತ್ತಿತರ ಕಾರ್ಯಗಳು ಈಗಾಗಲೇ ನಡೆದಿದೆ. ಮಾತೆ ಕಾವೇರಿಗೆ ತೊಡಿಸಲಾಗುವ ಆಭರಣಗಳನ್ನು ಬುಧವಾರ (ಅ.15) ಬೆಳಗ್ಗೆ ಭಾಗಮಂಡಲ ಭಗಂಡೇಶ್ವರ ದೇವಾಲಯದಿಂದ ತಲಕಾವೇರಿಗೆ ತೆಗೆದುಕೊಂಡು ಹೋಗಲಾಗುವುದು.
ಮುಂದಿನ ಒಂದು ತಿಂಗಳು ಈ ಆಭರಣಗಳು ತಲಕಾವೇರಿಯಲ್ಲಿ ಇರಲಿದೆ. ತೀರ್ಥೋದ್ಭವ ಹಿನ್ನೆಲೆಯಲ್ಲಿ ಭಾಗಮಂಡಲ, ತಲಕಾವೇರಿ ವ್ಯಾಪ್ತಿಯಲ್ಲಿ ಮದ್ಯ ಸೇವನೆ ಸಂಪೂರ್ಣ ನಿಷೇಧಿಸಲಾಗಿದೆ. ಕ್ಷೇತ್ರದಲ್ಲಿ ಧಾರ್ಮಿಕ ವಿದಿವಿಧಾನಗಳಿಗೆ ಯಾವುದೇ ಚ್ಯುತಿ ಬಾರದಂತೆ ನಡೆದುಕೊಳ್ಳಲು ಸೂಚನೆ ಕೊಡಲಾಗಿದೆ. ಕ್ಷೇತ್ರದ ಆಚಾರ ವಿಚಾರಕ್ಕೆ ಬದ್ಧರಾಗಿ ಯಾತ್ರಿಗಳು ನಡೆದುಕೊಳ್ಳಲು ಮನವಿ ಮಾಡಿಕೊಳ್ಳಲಾಗಿದೆ.
ಶ್ರೀ ಕ್ಷೇತ್ರದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಿದ್ದು, ಪ್ಲಾಸ್ಟಿಕ್ ಬಿಂದಿಗೆ, ಪ್ಲಾಸ್ಟಿಕ್ ಬಾಟಲಿಗಳಲ್ಲಿ ತೀರ್ಥ ಸಂಗ್ರಹಕ್ಕೆ ನಿರ್ಬಂಧ ವಿಧಿಸಲಾಗಿದೆ.
ಜಾತ್ರೆ ಸಂದಭÀðದಲ್ಲಿ ಕೆಎಸ್‌ಆರ್‌ಟಿಸಿಯಿಂದ ಹೆಚ್ಚುವರಿ ಬಸ್‌ಗಳ ನಿಯೋಜನೆ ಮಾಡಲಾಗಿದ್ದು, ಭಾಗಮಂಡಲ ಮತ್ತು ತಲಕಾವೇರಿ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊಡಗು ಏಕೀಕರಣ ರಂಗದಿAದ ತಲಕಾವೇರಿಯಲ್ಲಿ ಅನ್ನದಾನದ ವ್ಯವಸ್ಥೆಯನ್ನೂ ಮಾಡಲಾಗಿದೆ.
ಈ ವರ್ಷ ಮಧ್ಯಾಹ್ನ ಸಮಯದಲ್ಲಿ ತೀರ್ಥೋದ್ಭವ ಜರುಗಲಿರುವುದರಿಂದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾವೇರಿ ಮಾತೆಯ ದರ್ಶನವನ್ನು ಪಡೆಯಲು ಆಗಮಿಸುವ ನಿರೀಕ್ಷೆಯಿರುವುದರಿಂದ, ಜಿಲ್ಲಾಡಳಿತದಿಂದ ಪೂರ್ವ ಸಿದ್ಧತೆ ಕೈಗೊಳ್ಳುತ್ತಿದೆ. ಕಾವೇರಿ ತುಲಾ ಸಂಕ್ರಮಣ ಜಾತ್ರೆಗಾಗಿ ಶ್ರೀ ಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕಾವೇರಿ ನೀರಾವರಿ ನಿಗಮದ ವತಿಯಿಂದ ತ್ರಿವೇಣಿ ಸಂಗ್ರಮ ಸ್ನಾನಘಟ್ಟದಲ್ಲಿ ಹೂಳೆತ್ತುವುದು ಹಾಗೂ ದೇವಾಲಯದ ಆವರಣಗಳು ಮತ್ತು ಭಾಗಮಂಡಲಕ್ಕೆ ಸಂಪರ್ಕಿಸುವ ರಸ್ತೆಗಳ ಇಕ್ಕೆಲಗಳಲ್ಲಿ ಕಾಡು ಕಡಿದು ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಕೆಲಸ ಮಾಡಲಾಗುತ್ತಿದೆ.
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ
ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಅತೀ ಹೆಚ್ಚು ಮಳೆಯಿಂದಾಗಿ ದೇವಾಲಯಗಳ ಗೋಪುರ, ನೆಲಹಾಸು ಅಲಂಕಾರಿಕ ಕಲ್ಲುಗಳ ಶುಚಿತ್ವ ಕೆಲಸ ನಡೆದಿದೆ. ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಿಗೆ ವಿದ್ಯುತ್ ದೀಪಾಲಂಕಾರ, ಬ್ಯಾರಿಕೇಡ್ ಅಳವಡಿಕೆ, ವೇದಿಕೆ ನಿರ್ಮಾಣ, ಮಳೆಯಿಂದ ರಕ್ಷಣೆಗಾಗಿ ಮೆಟಲ್ ಶೀಟ್, ಪೆಂಡಾಲ್, ಹೂವಿನ ಅಲಂಕಾರ ಮತ್ತಿತರ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಭಕ್ತರಿಗೆ ತೊಂದರೆ ಆಗದ ರೀತಿಯಲ್ಲಿ ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಎನ್.ಜಿ. ಚಂದ್ರಶೇಖರ್, ಕಾರ್ಯ ನಿರ್ವಾಹಕ ಅಧಿಕಾರಿ, ಶ್ರೀ ಭಗಂಡೇಶ್ವರ, ತಲಕಾವೇರಿ ದೇವಾಲಯ