

ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕತ್ತರಿಘಟ್ಟದಲ್ಲಿನ ಇತಿಹಾಸ ಪ್ರಸಿದ್ಧ 413ನೇ ದಂಡಿನ ಜಾತ್ರಾ ಮಹೋತ್ಸವವು ಸಾಹಸ್ರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ಶನಿವಾರ ನಡೆಯಿತು.
ತಾಲೂಕಿನ ದಂಡಿಗನಹಳ್ಳಿ ಹೋಬಳಿಯಲ್ಲಿನ ಕತ್ತರಿಘಟ್ಟದಲ್ಲಿ ನಡೆಯುವ ಜಾತ್ರೆಯನ್ನು ಯಲಿಯೂರು, ಊಪಿನಹಳ್ಳಿ, ಗೆಜ್ಜಗಾರನಹಳ್ಳಿ, ಬಳದರೆ, ಮಡಬ ಸೇರಿ 8 ಗ್ರಾಮಗಳು ಆಚರಿಸುವುದು ವಿಶೇಷ. ಗೌರಿ-ಗಣೇಶ ಹಬ್ಬದ ತರುವಾಯದ ಎರಡನೇ ಶನಿವಾರ ಜಾತ್ರೆ ನಡೆಯುತ್ತದೆ. ಮೂರು ದಿನಗಳ ಕಾಲ ನಡೆಯುವ ಜಾತ್ರೆಯಲ್ಲಿ ಶುಕ್ರವಾರ ಲಕ್ಷ್ಮೀದೇವಿ ಉತ್ಸವ ನಡೆಸಿ ನಂತರ ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಹೊರವಲಯದಲ್ಲಿರುವ ದೇವಸ್ಥಾನದ ಆವರಣಕ್ಕೆ ತಂದು ರಾತ್ರಿ ರಥೋತ್ಸವ ನಡೆಸಲಾಯಿತು.
ಶನಿವಾರ ಬೆಳಗ್ಗೆ ಹರಕೆಹೊತ್ತ ಭಕ್ತರಿಂದ ಬಾಯಿಬೀಗ, ಮುಡಿ ಅರ್ಪಣೆ, ಸಿಡಿ ಉತ್ಸವ ನಡೆಸಲಾಯಿತು. ಅಕ್ಕಪಕ್ಕದ ಜಿಲ್ಲೆಗಳಿಂದ ಆಗಮಿಸುವ ಭಕ್ತರು ಕೋಳಿ, ಕುರಿ ಬಲಿ ನೀಡಿ ಮಾಂಸದೂಟ ಸವಿಯುವುದು ಇಲ್ಲಿನ ಪ್ರಮುಖ ಆಚರಣೆ.
ಭಕ್ತರ ಅನುಕೂಲಕ್ಕಾಗಿ ದೇವಸ್ಥಾನದ ಸುತ್ತ ಕಾಂಕ್ರೀಟ್ ರಸ್ತೆ, ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿ, ತಂಗುದಾಣ, ನೀರಿನ ವ್ಯವಸ್ಥೆ, ಮುಡಿ ಕೊಠಡಿ ಸೇರಿ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಕಾಚೇನಹಳ್ಳಿ ಏತನೀರಾವರಿ ಯೋಜನೆಯಡಿ ದೇವಸ್ಥಾನದ ಆವರಣದಲ್ಲಿರುವ ಕೆರೆ ತುಂಬಿರುವ ಹಿನ್ನೆಲೆಯಲ್ಲಿ ಜಾತ್ರೆ ಆಚರಣೆಯ ಭಕ್ತರಿಗೆ ಅನುಕೂಲವಾಗಿದೆ.