ಕೆಲವೇ ಮಂದಿಯಿಂದ ಜಾಥಾಗೆ ಸ್ವಾಗತ

ckm jataha
ಚಿಕ್ಕಮಗಳೂರು ತಾಲೂಕಿನ ಅಲ್ಲಂಪುರದಲ್ಲಿ ಸಂವಿಧಾನ ಜಾಗೃತಿ ಜಾಥಾ ರಥ ಸ್ವಾಗತಿಸಲು ಸೇರಿರುವ ಜನರು.
Published on

ಚಿಕ್ಕಮಗಳೂರು: ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗ್ರಾಪಂ ಸದಸ್ಯರ ಗೈರಿನಿಂದ ಸಂವಿಧಾನ ಜಾಗೃತಿ ಜಾಥಾದ ರಥಯಾತ್ರೆಯನ್ನು ತಾಲೂಕಿನ ಅಲ್ಲಂಪುರ ಗ್ರಾಮದಲ್ಲಿ ಬೆರಳಣಿಕೆಯಷ್ಟು ಮಂದಿ ಸ್ವಾಗತಿಸಿದ್ದು ಭಾನುವಾರ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಯಿತು.

ಸಂವಿಧಾನ ಜಾಗೃತಿ ಜಾಥಾ ಆಯ್ದ ಗ್ರಾಪಂಗಳಿಗೆ ಬಂದಾಗ ಅದ್ದೂರಿಯಾಗಿ ಸ್ವಾಗತಿಸಬೇಕು. ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ರಥಯಾತ್ರೆ ಸ್ವಾಗತಿಸುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರು. ಆದರೆ ಕೆಳಮಟ್ಟದ ಅಧಿಕಾರಿಗಳ ನಿರ್ಲಕ್ಷೃದಿಂದಾಗಿ ಜನರೇ ಸೇರಿರಲಿಲ್ಲ. ಗ್ರಾಪಂ ಸದಸ್ಯರೇ ಕಾರ್ಯಕ್ರಮಕ್ಕೆ ಗೈರಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಗ್ರಾಮದ ಮುಖಂಡ ಹಾಗೂ ವಕೀಲ ಅನಿಲ್‌ಕುಮಾರ್ ಮಾತನಾಡಿ, ಜ.26 ರಂದು ಸಂವಿಧಾನ ಜಾೃತಿ ಜಾಥಾಗೆ ಸಚಿವರು ಚಾಲನೆ ನೀಡಿದ್ದಾರೆ. ಈ ರಥ ಪ್ರತಿ ಗ್ರಾಪಂಗಳಿಗೆ ಭೇಟಿ ನೀಡಬೇಕು. ಸ್ಥಳೀಯ ಅಧಿಕಾರಿಗಳು ಸಮರ್ಪಕವಾಗಿ ತಯಾರಿ ನಡೆಸಿ ಸಂವಿಧಾನದ ಆಶಯ ತಿಳಿಸಬೇಕೆಂಬ ನಿಯಮವಿದ್ದರೂ ಅಲ್ಲಂಪುರ ಗ್ರಾಪಂನಲ್ಲಿ ಕಾಟಾಚಾರಕ್ಕೆ ಕಾರ್ಯಕ್ರಮ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಪ್ರತಿ ಪ್ರಜೆಗೂ ಸಂವಿಧಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಜಾಗೃತಿ ಜಾಥಾ ನಡೆಸಲು ಜಿಲ್ಲಾವಾರು ಅನುದಾನ ಬಿಡುಗಡೆಗೊಳಿಸಲಾಗಿದೆ. ಜಾಥಾವು ಪ್ರತಿ ಗ್ರಾಪಂಗೆ ತೆರಳಿ ಸಂವಿಧಾನದ ಆಶಯ, ಸರ್ಕಾರದ ಸವಲತ್ತು, ಕಲ್ಯಾಣ ಕಾರ್ಯಕ್ರಮ ಮಾಹಿತಿ ನೀಡಬೇಕೆಂಬ ಆದೇಶವಿದ್ದರೂ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ದೂರಿದರು.
ಭಾನುವಾರ ಬೆಳಗ್ಗೆ ಅಲ್ಲಂಪುರ ಗ್ರಾಮಕ್ಕೆ ಜಾಗೃತಿ ಜಾಥಾ ಬಂದರೂ ಶಿಕ್ಷಣ ಇಲಾಖೆ ಸಿಬ್ಬಂದಿ, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಜರಿರಲಿಲ್ಲ. ಪಿಡಿಒ, ಮೂವರು ಸದಸ್ಯರು ಹಾಗೂ ಗ್ರಾಮಸ್ಥರು ಸೇರಿ ಒಟ್ಟು 12 ಮಂದಿ ಮಾತ್ರ ಜಾಥಾದಲ್ಲಿ ಪಾಲ್ಗೊಂಡಿದ್ದು ಬೇಸರ ತರಿಸಿದೆ ಎಂದು ಅಸಮಾಧಾನ ಹೊರಹಾಕಿದರು.
ಜಾಥಾವು ಗ್ರಾಮಕ್ಕೆ ಭೇಟಿ ನೀಡುತ್ತಿರುವ ಸಂಬಂಧ ಒಂದು ದಿನ ಮುಂಚಿತವಾಗಿ ಮೈಕ್ ಮುಖಾಂತರ ಸಮರ್ಪಕವಾಗಿ ಪ್ರಚಾರ ಕೈಗೊಂಡಿಲ್ಲ. ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಿದ್ದರೂ ಶಿಕ್ಷಕರು, ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿಲ್ಲ. ಇಂಥ ಅರ್ಥಪೂರ್ಣ ಕಾರ್ಯಕ್ರಮವನ್ನು ಗ್ರಾಪಂ ಅಧಿಕಾರಿ, ನೋಡಲ್ ಮತ್ತು ಶಿಕ್ಷಣ ಇಲಾಖೆ ಸಮರ್ಪಕವಾಗಿ ನಿಭಾಯಿಸದಿರುವ ಕಾರಣ ಸಾಮಾನ್ಯ ಕಾರ್ಯ ಕ್ರಮದಂತಾಗಿರುವುದು ನೋವುಂಟು ಮಾಡಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net