

ಹುಬ್ಬಳ್ಳಿ: ದೇಶದಲ್ಲಿ ಬಿಜೆಪಿಯೇತರ ಸರ್ಕಾರಗಳನ್ನು ಅಸ್ಥಿರಗೊಳಿಸುತ್ತಿರುವುದನ್ನು ಖಂಡಿಸಿ ಹಾಗೂ ಸಿದ್ದರಾಮಯ್ಯ ಅವರಿಗೆ ಮಾನಸಿಕ ಸ್ಥೈರ್ಯ ನೀಡುವ ಸಲುವಾಗಿ ಅ. 3ರಿಂದ ಎರಡು ದಿನ ಸಂವಿಧಾನ ಜಾಗೃತಿ ಹಾಗೂ "ಅಹಿಂದ ನಾಯಕರ ಉಳಿಸಿ' ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಅಹಿಂದ ಸಂಘಟನೆ ರಾಜ್ಯಾಧ್ಯಕ್ಷ ಮುತ್ತಣ್ಣ ಶಿವಳ್ಳಿ ತಿಳಿಸಿದರು.
ಇಲ್ಲಿಯ ಪ್ರವಾಸಿ ಮಂದಿರದಲ್ಲಿ ಬುಧವಾರ ಸಂಘಟನೆಯ ಪದಾಧಿಕಾರಿಗಳು, ಕಾರ್ಯಕರ್ತರ ಪೂರ್ವಭಾವಿ ಸಭೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿರುವ ಹಿನ್ನಲೆಯಲ್ಲಿ ಹೈಕೋರ್ಟ್ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕಾಂಗ್ರೆಸ್ ಸರ್ಕಾರ ಹಾಗೂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಬೇಕೆಂದು ಹುನ್ನಾರ ನಡೆಸಿರುವುದು ಖಂಡನೀಯ. ಇದರ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ಸಿದ್ದರಾಮಯ್ಯ ಅವರು ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟಿದ್ದಾರೆ. ಅಂತಹ ನಾಯಕರಿಗೆ ರಾಜ್ಯಪಾಲರ ಮೂಲಕ ಕಿರುಕುಳ ನೀಡುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ಆಡಳಿತ ಇಲ್ಲದ ರಾಜ್ಯಗಳಲ್ಲಿ ಇದೇ ರೀತಿ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಮುತ್ತಣ್ಣ ಆರೋಪಿಸಿದರು.
ಈ ಎಲ್ಲ ಹಿನ್ನೆಲೆಯಲ್ಲಿ ಅ. 3ರಂದು ಬೆಳಗ್ಗೆ 9ಕ್ಕೆ ಹುಬ್ಬಳ್ಳಿಯ ಇಂದಿರಾಗಾಜಿನ ಮನೆಯಿಂದ ಜಾಥಾ ಹೊರಟು ಮಾರ್ಗ ಮಧ್ಯೆ ರಾಯಣ್ಣ, ಚನ್ನಮ್ಮಹಾಗೂ ಡಾ. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕುಂದಗೋಳ ಮೂಲಕ ಬೆಂಗಳೂರಿನತ್ತ ಸಾಗಲಿದೆ. ಎರಡನೇ ದಿನ ಬೆಂಗಳೂರಿನ ವಿಧಾನಸೌಧ ಎದುರು ಜಾಥಾ ಸಮಾರೋಪಗೊಳ್ಳಲಿದೆ ಎಂದರು.
ಕಾಂಗ್ರೆಸ್‌ನ 136 ಶಾಸಕರು, ಸಿದ್ದರಾಮಯ್ಯ ಅಭಿಮಾನಿಗಳು, ಬಿಜೆಪಿ, ಜೆಡಿಎಸ್ ಸೇರಿ ಅನೇಕ ಅಹಿಂದ ನಾಯಕರು ನೈತಿಕ ಬೆಂಬಲ ನೀಡುತ್ತಿದ್ದು, ಜಾಥಾದಲ್ಲಿ ಸಾವಿರಾರು ಜನರು ಭಾಗವಹಿಸುವರು. ಈ ಹಿನ್ನಲೆಯಲ್ಲಿ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಕುಗ್ಗಬಾರದು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬಾರದು ಎಂದರು.
ಸಂಘಟನೆಯ ರಾಜಶೇಖರ ಮೆಣಸಿನಕಾಯಿ, ಗುರುನಗೌಡ ಪಾಟೀಲ, ಯುಸುಪ್ ಬಳ್ಳಾರಿ, ಬಾಬಾಜಾನ ಮುಧೋಳ, ವೀರಣಗೌಡ ಪಾಟೀಲ್, ವಿಶಾಲ ವಾಘಮೋಡೆ, ಶ್ರೀಧರ ದೊಡ್ಡಮನಿ, ಸಂಗೀತಾ ಚಾವರೆ, ತನ್ವೀರ ಮುಳಗುಂದ, ಸುರೇಶ ಬೀರಣ್ಣವರ ಇತರರು ಉಪಸ್ಥಿತರಿದ್ದರು.