ಕುಶಾಲನಗರದಲ್ಲಿ ಈದ್ ಮಿಲಾದ್ ಜಾಥಾ

jatha
Published on

ಕುಶಾಲನಗರ:

ಪ್ರವಾದಿ ಪೈಗಂಬರ್ ಮುಹಮ್ಮದ್ ಅವರ 1500 ಜನ್ಮ ದಿನದ ಪ್ರಯುಕ್ತ ಕುಶಾಲನಗರದಲ್ಲಿ ಶಾಂತಿ, ಸಹೋದರತೆಯನ್ನು ಸಾರುವ ಈದ್ ಮಿಲಾದ್ ಜಾಥಾ ಭಾನುವಾರ ನಡೆಯಿತು. ದಾರುಲ್ ಉಲೂಂ ಮದ್ರಸ, ಹಿಲಾಲ್ ಮಸೀದಿ ಹಾಗೂ ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ವತಿಯಿಂದ ಪ್ರವಾದಿಯವರ ಜನ್ಮದಿನ ಹಿನ್ನೆಲೆ ಪ್ರವಾದಿಯವರ ಸಂದೇಶವನ್ನು ಸಾರುವ ಮೆರವಣಿಗೆ ಏರ್ಪಡಿಸಲಾಗಿತ್ತು.

ಕುಶಾಲನಗರದ ದಾರುಲ್ ಉಲೂಂ ಮದ್ರಸದಿಂದ ಹೊರಟ ಮೆರವಣಿಗೆ ಕುಶಾಲನಗರದ ಮುಖ್ಯರಸ್ತೆಯ ಮೂಲಕ ಹಾದುಹೋಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿತು. ಈದ್ ಮಿಲಾದ್ ಮೆರವಣಿಗೆಯಲ್ಲಿ ದಾರುಲ್ ಉಲೂಂ ಮದ್ರಸ ವಿದ್ಯಾರ್ಥಿಗಳು ದಫ್ ಪ್ರದರ್ಶಿಸಿದರು. ಮದ್ರಸ ವಿದ್ಯಾರ್ಥಿಗಳು ವಿಶೇಷ ಉಡುಗೆಗಳನ್ನು ತೊಟ್ಟು ಸಾರ್ವಜನಿಕರ ಕಣ್ಮನ ಸೆಳೆದರು.

ಮೆರವಣಿಗೆಯಲ್ಲಿ ಪ್ರವಾದಿಯವರು ಜೀವನ ಸಂದೇಶಗಳನ್ನು, ಆದರ್ಶಗಳನ್ನು, ಅವರ ನಡೆದು ಬಂದ ಹಾದಿಯನ್ನು ಸಾರಲಾಯಿತು. ಎಲ್ಲರೂ ಜಾತಿ, ಧರ್ಮವನ್ನು ಬಿಟ್ಟು ಪರಸ್ಪರ ಸಹೋದರರಂತೆ, ಶಾಂತಿ ಸಮಾನತೆಯಿಂದ ಬಾಳಿ ಬದುಕಬೇಕು ಎಂದು ಧರ್ಮಗುರುಗಳು ಕರೆ ನೀಡಿದರು. ಪ್ರವಾದಿಯವರ ಜನ್ಮ ದಿನ ಪ್ರಯುಕ್ತ ಮಕ್ಕಳಿಗೆ ಸಿಹಿ ಹಾಗೂ ತಂಪು ಪಾನೀಯಗಳನ್ನು ಹಂಚಲಾಯಿತು.

ಈ ಸಂದರ್ಭ ಹಿಲಾಲ್ ಮಸೀದಿ ಕಮಿಟಿ ಪದಾಧಿಕಾರಿಗಳು, ದಾರುಲ್ ಉಲೂಂ ಮದ್ರಸ ಅಧ್ಯ್ಯಾಪಕರು, ನುಸ್ರತುಲ್ ಇಸ್ಲಾಂ ಯೂತ್ ಅಸೋಸಿಯೇಷನ್ ಪ್ರಮುಖರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net