

ಹೂವಿನಹಡಗಲಿ: ವಿಜಯನಗರ ಕಾಲದಿಂದಲೂ ರಾಜ್ಯ ಸೇರಿದಂತೆ ಅಂತಾರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿರುವ ಹಡಗಲಿ ಮಲ್ಲಿಗೆಯ ಬೆಲೆ ಕುಸಿತದಿಂದ ಬೆಳೆ ನಂಬಿದ ರೈತರು ಕಂಗಾಲಾಗಿದ್ದಾರೆ.
ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಕೇಜಿ ಮಲ್ಲಿಗೆಗೆ ಸುಮಾರು 500 ರಿಂದ 650 ರೂ.ವರೆಗೆ ಬೆಲೆ ದೊರೆಯುತ್ತಿತ್ತು. ಆದರೆ ಕಳೆದ ವಾರದಿಂದ ಕೇಜಿ ಮಲ್ಲಿಗೆಗೆ 75 ರಿಂದ 80 ರೂ.ಬೆಲೆ ದೊರಕುತ್ತಿದೆ.
ದಾವಣಗೆರೆ, ಹಾವೇರಿ, ಗದಗ, ಹುಬ್ಬಳಿ ಮಾರುಕಟ್ಟೆಯಲ್ಲಿ ಮಲ್ಲಿಗೆಯ ದರ ಕುಸಿತ ಕಂಡಕಾರಣ ರೈತರು ಮಲ್ಲಿಗೆಯನ್ನು ಕಟಾವು ಮಾಡದೆ ಗಿಡಗಳಲ್ಲಿಯೆ ಬಿಡುತ್ತಿದ್ದಾರೆ.
ಪಟ್ಟಣ ಸೇರಿದಂತೆ ತಾಲೂಕಿನ ಹನಕನಹಳ್ಳಿ, ದೇವಗೊಂಡನಹಳ್ಳಿ, ತಿಪ್ಪಾಪುರ, ಉಪನಾಯಕನಹಳ್ಳಿ, ಹಾಲ್‌ತಿಮಲಾಪುರ, ಕೊಂಬಳಿ, ಮುದೇನೂರು ಸೇರಿದಂತೆ ಇತರೆ ಭಾಗಗಳಲ್ಲಿ ಸುಮಾರು 200 ರಿಂದ 250 ಎಕ್ಕರೆ ಪ್ರದೇಶದಷ್ಟು ಮಲ್ಲಿಗೆಯನ್ನು ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ದಾವಣಗೆರೆ, ಗದಗ, ಹುಬ್ಬಳಿ, ಹಾವೇರಿ ಭಾಗಗಳಲ್ಲಿನ ಮಾರುಕಟ್ಟೆಗಳಲ್ಲಿ ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳ ಹಾವಳಿಯಿಂದ ರೈತರಿಗೆ ದೊರಕಬೇಕಿದ್ದ ಹಣ ಸಮರ್ಪಕವಾಗಿ ದೊರಕುತ್ತಿಲ್ಲ. ಇನ್ನು ರೈತರಿಂದ ಖರೀದಿಸಿ ಮಾರಾಟ ಮಾಡುವ ಕೆಲವು ದಲ್ಲಾಳಿಗಳು ಇಂತಿಷ್ಟು ಹಣ ಎಂದು ನಿಗದಿ ಮಾಡುತ್ತಿದ್ದಾರೆ. ಇದರಿಂದ ಮಲ್ಲಿಗೆ ಬೆಳೆಗೆ ಬೆಲೆ ದೊರಕುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ.
ತಾಲೂಕಿನ ಮಲ್ಲಿಗೆ ತೋಟಗಳಲ್ಲಿ ಮಲ್ಲಿಗೆಯ ಮೊಗ್ಗು ಬಿಡಿಸಲು ಮಹಿಳೆಯರಿಗೆ 1 ಕೆ.ಜಿ ಗೆ 100 ರಿಂದ 120 ರೂ.ಗಳನ್ನು ನೀಡಲಾಗುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಮಲ್ಲಿಗೆಯ ಬೆಲೆ 80 ರೂ ದೊರಕುತ್ತಿದೆ. ಇದರಿಂದ ಮಲ್ಲಿಗೆ ಬೆಳೆಗಾರರು ಹೆಚ್ಚಿನ ಹಣವನ್ನು ನೀಡುವ ಅನಿವಾರ್ಯತೆ ಎದುರಾಗಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಬೆಳೆಯುವ ಮಲ್ಲಿಗೆ ಹೂಗಳಲ್ಲಿ ಹಡಗಲಿ ಮಲ್ಲಿಗೆಗೆ ಹೆಚ್ಚಿನ ಬೇಡಿಕೆ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಬೇರೆ ಭಾಗಗಳಿಂದ ವಿವಿಧ ತರಹದ ಹೂಗಳು ಮಾರುಕಟ್ಟೆಗೆ ಬರುವುದರಿಂದ ಅಲ್ಪ ಪ್ರಮಾಣದಲ್ಲಿ ಮಲ್ಲಿಗೆ ಬೆಳೆಗೆ ಬೇಡಿಕೆ ಕಡಿಮೆಯಾಗಿದೆ ಎಂಬುದು ದಲ್ಲಾಳಿಗಳ ವಾದವಾಗಿದೆ.
ರಾಜ್ಯದಲ್ಲಿಯೇ ಹೆಸರು ಹೊಂದಿದ್ದ ಹಡಗಲಿ ಮಲ್ಲಿಗೆಯನ್ನು ನಮ್ಮ ಪೂರ್ವಜರ ಕಾಲದಿಂದಲೂ ನಾವು ಬೆಳೆಯುತ್ತಲೇ ಬಂದಿದ್ದೇವೆ. ಆದರೆ ಅಲ್ಪ ಪ್ರಮಾಣದಲ್ಲಿ ಬೆಳೆ ಇಳಿಕೆ ಕಂಡು ಪುನಃ ಯತಾಸ್ಥಿತಿಗೆ ಬೆಳೆ ದೊರಕುತ್ತಿತ್ತು. ಆದರೆ ಈಗ ನಾವು ಮೊಗ್ಗು ಬಿಡಿಲು ನೀಡುವ ಹಣಕ್ಕೆ ತಕ್ಕಷ್ಟಾದರೂ ಬೆಲೆ ದೊರಕುತ್ತಿಲ್ಲ. ಇದರಿಂದ ಮಲ್ಲಿಗೆಯ ಮೊಗ್ಗನ್ನು ಬಿಡಿಸದೆ ಗಿಡಗಳಲ್ಲಿಯೇ ಬಿಡುತ್ತಿದ್ದೇವೆ. ಮಹಾಂತೇಶ ಮುದೇನೂರು ಮಲ್ಲಿಗೆ ಬೆಳೆಗಾರ ಮುದೇನೂರು ಬಿಸಿಲು ಮತ್ತು ಮಳೆ ಚನ್ನಾಗಿರುವುದರಿಂದ ಮಲ್ಲಿಗೆ ಇಳುವರಿ ಹೆಚ್ಚಾಗಿದೆ. ಆದರೆ ಹೆಚ್ಚಿನ ಇಳುವರಿ ಇರುವುದರಿಂದ ಹಾಗೂ ಬೇರೆ ಭಾಗಗಳಿಂದ ಸೇವಂತಿಗೆ ಸೇರಿದಂತೆ ಇತರೆ ಹೂಗಳು ಮಾರುಕಟ್ಟೆಯಲ್ಲಿ ದೊರಕುತ್ತಿವೆ ಇದರಿಂದ ಮಲ್ಲಿಗೆಯ ಬೇಡಿಕೆ ಕಡಿಮೆಯಾಗುತ್ತಿದೆ. ಸುಬಾನ್ ಸಾಬ್ ಮಲ್ಲಿಗೆ ವ್ಯಾಪಾರಿ ಹೂವಿನಹಡಗಲಿ