ಪರಿಹಾರ ಪಡೆಯಲು ನಿರಾಸಕ್ತಿ, ಮಲ್ಲಿಗೆ ಬೆಳೆಗಾರರಿಗೆ ಪ್ರಯೋಜನವಾಗದ ಯೋಜನೆ

jas
Published on

- ಅವಿನ್ ಶೆಟ್ಟಿ ಉಡುಪಿ

ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿದ ವಿಶೇಷ ಪ್ಯಾಕೇಜ್‌ನ ಪರಿಹಾರ ಮೊತ್ತ ಪಡೆಯಲು ಅಧಿಕಾರಿಗಳೇ ಮನವಿ ಮಾಡುತ್ತಿದ್ದರೂ ಬೆಳೆಗಾರರು ಹಿಂದೇಟು ಹಾಕುತ್ತಿದ್ದಾರೆ. ಕಾರಣ, ತೀರ ಕಡಿಮೆ ಮೊತ್ತವನ್ನು ಸರ್ಕಾರ ನಿಗದಿಪಡಿಸಿರುವುದು.

ಹೂ, ಹಣ್ಣು, ತರಕಾರಿ ಮತ್ತಿತರ ತೋಟಗಾರಿಕಾ ಬೆಳೆಯನ್ನು ಮಾರುಕಟ್ಟೆಗೆ ಪೂರೈಸುವ ಸಮಯದಲ್ಲಿ ಲಾಕ್‌ಡೌನ್‌ನಿಂದಾಗಿ ಬೆಳೆಗಾರರು ನಷ್ಟ ಅನುಭವಿಸಿದ್ದರು. ಮಾರುಕಟ್ಟೆ, ವಾಹನ ವ್ಯವಸ್ಥೆ, ಸಭೆ ಸಮಾರಂಭಗಳು ಇಲ್ಲದಿರುವುದರಿಂದ ಬೇಡಿಕೆಯೂ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ವಿವಿಧ ಹಂತದಲ್ಲಿ ರೈತರಿಗೆ ಪ್ಯಾಕೇಜ್ ಘೋಷಿಸಿತ್ತು.

ಜುಜುಬಿ ಪರಿಹಾರ: ಮಲ್ಲಿಗೆ ಹೂ, ತರಕಾರಿ, ಹಣ್ಣು ಬೆಳೆಯನ್ನು ಸಾವಿರಾರು ರೂ. ವ್ಯಯಿಸಿ ಬೆಳೆವ ರೈತರು ಸರ್ಕಾರದ ಅಲ್ಪ ಮೊತ್ತದ ಪರಿಹಾರ ತೆಗೆದುಕೊಳ್ಳಲು ಮುಂದೆ ಬರುತ್ತಿಲ್ಲ. ತರಕಾರಿ, ಹಣ್ಣು ಬೆಳೆಗಾರರಿಗೆ ಕನಿಷ್ಠ 2 ಸಾವಿರ ರೂ. ಪರಿಹಾರ ನಿಗದಿಯಾಗಿದೆ. ಆದರೆ ಹೂ ಬೆಳೆಗಾರರಿಗೆ ಇಷ್ಟೂ ಇಲ್ಲ. ಹೆಕ್ಟೇರ್ ಹೂವಿನ ಬೆಳೆಗೆ ಸರ್ಕಾರ ಘೋಷಿಸಿರುವುದು 25 ಸಾವಿರ ರೂ. ಪರಿಹಾರ. ಆದರೆ ಮಲ್ಲಿಗೆ ಹೂ 5- 10 ಸೆಂಟ್ಸ್ ಜಮೀನಿನಲ್ಲೇ ಹೆಚ್ಚು ಬೆಳೆಯಲಾಗುತ್ತದೆ. ಒಬ್ಬ ಬೆಳೆಗಾರನಿಗೆ 300-500 ರೂ. ಪರಿಹಾರ ಸಿಗಬಹುದು. ಇಷ್ಟು ಸಣ್ಣ ಮೊತ್ತಕ್ಕೆ ಯಾರು ಒದ್ದಾಡುತ್ತಾರೆ ಎಂಬುದು ರೈತರ ಪ್ರಶ್ನೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ದಾಖಲಾತಿ ಇಲ್ಲದವರೇ ಹೆಚ್ಚು

ಫ್ರೂೃಟ್ ತಂತ್ರಾಂಶದಲ್ಲಿ ಫಾರ್ಮರ್ ಐಡಿ ನೋಂದಾಯಿಸಿ ದಾಖಲಾತಿ ಮಾಡಿಕೊಂಡವರಿಗೆ ಮಾತ್ರ ಬ್ಯಾಂಕ್ ಖಾತೆಗೆ ಪರಿಹಾರ ಜಮಾ ಆಗುತ್ತದೆ. ಆದರೆ ಜಿಲ್ಲೆಯಲ್ಲಿ ಶೇ.50ಕ್ಕೂ ಅಧಿಕ ರೈತರು ನೋಂದಣಿ ಮಾಡಿಸಿಲ್ಲ. ದಾಖಲಾತಿ ಸಲ್ಲಿಸಿ, ಪರಿಹಾರ ಮೊತ್ತ ವಿತರಿಸಲು ಅಧಿಕಾರಿಗಳೇ ದುಂಬಾಲು ಬಿದ್ದರೂ ಆಸಕ್ತಿ ತೋರುತ್ತಿರುವವರು ಕೆಲವರು ಮಾತ್ರ.

ಎಷ್ಟು ಪರಿಹಾರ?: ಜಿಲ್ಲೆಯ 580 ಮಂದಿ ಹೂವು ಬೆಳೆಗಾರರಿಗೆ 6.48 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಇನ್ನೂ 730 ಮಂದಿಗೆ ವಿತರಣೆಗೆ ಬಾಕಿ ಇದೆ. 430 ಮಂದಿ ದಾಖಲಾತಿ ಸಲ್ಲಿಸಿಲ್ಲ. 10,473 ಹಣ್ಣು ಬೆಳೆಗಾರರ ಪೈಕಿ 3041 ಮಂದಿ ಮಾತ್ರ ಪರಿಹಾರಕ್ಕೆ ದಾಖಲಾತಿ ಸಲ್ಲಿಸಿದ್ದಾರೆ. ಇದುವರೆಗೆ 640 ಬೆಳೆಗಾರರಿಗೆ 21.48 ಲಕ್ಷ ರೂ. ವಿತರಿಸಲಾಗಿದೆ. ತರಕಾರಿ ಬೆಳೆಗಾರರಿಗೆ 188 ಜನರಲ್ಲಿ 41 ಮಂದಿಗೆ ಪರಿಹಾರ ನೀಡಲಾಗಿದೆ.

ಬೆಳೆಗಾರರಿಗೆ ಸರ್ಕಾರ ಘೋಷಿಸಿದ ಪ್ಯಾಕೇಜ್ ಪರಿಹಾರವನ್ನು ಹಂತಹಂತವಾಗಿ ವಿತರಿಸಲಾಗುತ್ತಿದೆ. ಮೊತ್ತ ಅತಿ ಕಡಿಮೆ ಇದೆ ಎಂಬ ಅಭಿಪ್ರಾಯದೊಂದಿಗೆ ಬೆಳೆಗಾರರೇ ಪರಿಹಾರ ಪಡೆಯಲು ಮುಂದೆ ಬರುತ್ತಿಲ್ಲ. ಹೀಗಾಗಿ ನಿರೀಕ್ಷಿತ ಮಟ್ಟದಲ್ಲಿ ರೈತರಿಂದ ದಾಖಲಾತಿ ಸಲ್ಲಿಕೆಯಾಗದೆ ಪರಿಹಾರ ಮೊತ್ತ ವಿತರಿಸಲು ಸಾಧ್ಯವಾಗುತ್ತಿಲ್ಲ. -ಭುವನೇಶ್ವರಿ, ಉಪ ನಿರ್ದೇಶಕಿ, ತೋಟಗಾರಿಕೆ ಇಲಾಖೆ ಉಡುಪಿ ಜಿಲ್ಲೆ ಜಿಲ್ಲೆಯಲ್ಲಿ ಮುಖ್ಯವಾಗಿ ಮಲ್ಲಿಗೆ ಬೆಳೆಗಾರರಿಗೆ ಕೋವಿಡ್ ಪರಿಹಾರ ಪ್ಯಾಕೇಜ್‌ನಿಂದ ಅನುಕೂಲವಾಗಿಲ್ಲ. ಹೂ ಬೆಳೆಗಾರರಿಗೆ 25 ಸಾವಿರ ಹೆಕ್ಟೇರ್‌ಗೆ ಪರಿಹಾರ ಮೊತ್ತ ನಿಯಮ ರೂಪಿಸಲಾಗಿದೆ. ಉಡುಪಿಯ ಮಲ್ಲಿಗೆ ಬೆಳೆಗಾರರಿಗೆ ಇದು ಸರಿ ಹೊಂದುವುದಿಲ್ಲ. ಇಲ್ಲಿ 5-10 ಸೆಂಟ್ಸ್‌ನಲ್ಲಿ ಮಲ್ಲಿಗೆ ಬೆಳೆಯುವರು ಜಾಸ್ತಿ. ಈ ಲೆಕ್ಕ್ಕಾಚಾರದಲ್ಲಿ ಬೆಳೆಗಾರರಿಗೆ 100-200 ರೂ., ಪರಿಹಾರ ದೊರೆಯುತ್ತದೆ. ಕೆಲವು ಬೆಳೆಗಾರರು ದಾಖಲೆ ಸಲ್ಲಿಸಿ ಸಣ್ಣಮೊತ್ತದ ಪರಿಹಾರ ಪಡೆಯಲು ಆಸಕ್ತಿ ತೋರಿಸಿಲ್ಲ. ಈ ಹಿಂದೆ ಬೆಳೆ ಸಮೀಕ್ಷೆ ಪ್ರಕ್ರಿಯೆಯಲ್ಲಿ ದಾಖಲೆ ನೀಡಿ ನೋಂದಾಯಿಸಿದ್ದ ರೈತರಿಗೆ ಪರಿಹಾರ ಮೊತ್ತ ದೊರೆತಿದೆ. -ರಾಘವೇಂದ್ರ ನಾಯ್ಕ ಶಿರ್ವ, ಮಲ್ಲಿಗೆ ಕೃಷಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net