ವೈರಾಣು ಪರಿಣಾಮ ಬಾಡಿದ ಉಡುಪಿ ಮಲ್ಲಿಗೆ, ಇಳುವರಿಯಿದ್ದರೂ ಮಾರುಕಟ್ಟೆ ಇಲ್ಲ

mallige
Published on

ಉಡುಪಿ: ಕರೊನಾ ಲಾಕ್‌ಡೌನ್ ಮಲ್ಲಿಗೆ ಬೆಳೆಗಾರರಿಗೆ ಸೀಸನ್‌ನಲ್ಲೇ ಹೊಡೆತ ನೀಡಿದೆ.

ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ 116 ಹೆಕ್ಟೇರ್‌ನಲ್ಲಿ ಮಲ್ಲಿಗೆ ಬೆಳೆ ಬೆಳೆಯಲಾಗುತ್ತಿದೆ. ಸಾಮಾನ್ಯವಾಗಿ ಫೆಬ್ರವರಿ, ಮಾರ್ಚ್, ಏಪ್ರಿಲ್, ಮೇ ತಿಂಗಳಲ್ಲಿ ಉತ್ತಮ ಸೀಸನ್ ಆಗಿದ್ದು, ಮಾರುಕಟ್ಟೆಯಲ್ಲಿಯೂ ಮಲ್ಲಿಗೆಗೆ ಉತ್ತಮ ದರ ಇರುತ್ತದೆ. ಆದರೆ ಕರೊನಾ ಬೆಳೆಗಾರರ ಸಣ್ಣ ಆದಾಯ ಮೂಲವನ್ನು ಕಿತ್ತುಕೊಂಡಿದೆ ಎಂದು ಬೆಳೆಗಾರರು ಆಸಾಹಯಕತೆ ವ್ಯಕ್ತಪಡಿಸಿದ್ದಾರೆ. ಮಲ್ಲಿಗೆ ಕೃಷಿಕರು ಕಂಗಾಲಾಗಿದ್ದಾರೆ.

ಕರೊನಾ ವೈರಸ್ ವ್ಯಾಪಕವಾಗುತ್ತಿದ್ದಂತೆ ಮಾ.16ರಿಂದ ಮಲ್ಲಿಗೆ ಮಾರುಕಟ್ಟೆಗೆ ಹೊಡೆತ ಬಿದ್ದಿದೆ. ಮಾ.15ರಂದು ಅಟ್ಟೆಗೆ 630 ರೂ, ಇದ್ದ ದರ ಮರುದಿನ ಮಾ.16ಕ್ಕೆ 340ಕ್ಕೆ ಕುಸಿದೆ. 17ಕ್ಕೆ 170 ರೂ, 18ಕ್ಕೆ 110 ರೂ, 19ಕ್ಕೆ 150 ರೂ, 20ಕ್ಕೆ 130 ರೂ, 21ಕ್ಕೆ 150 ರೂ, 22ಕ್ಕೆ 90 ರೂ, 23ರಂದು ದರ ಪಾತಳಕ್ಕೆ ಇಳಿಯುವ ಮೂಲಕ ಅಟ್ಟೆಗೆ 50 ರೂ.ತಲುಪಿತ್ತು. 24ರಿಂದ ಮಾರುಕಟ್ಟೆಯೆ ಸ್ಥಗಿತವಾಗಿದೆ.

ಪ್ರತೀ ವರ್ಷ ಈ ಸಮಯದಲ್ಲಿ ಉತ್ಸವ, ಜಾತ್ರೆ, ಮದುವೆ, ಬಯಕೆ, ಗೃಹ ಪ್ರವೇಶ ಇನ್ನಿತರೆ ಸಂಘ, ಸಂಸ್ಥೆಗಳ ಕಾರ್ಯಕ್ರಮ, ಶುಭ ಸಮಾರಂಭಗಳು ಹೆಚ್ಚು ನಡೆಯುವುದರಿಂದ ಮಲ್ಲಿಗೆ ಉತ್ತಮ ಬೇಡಿಕೆ ಇರುತ್ತದೆ. ಪ್ರತೀ ವರ್ಷ ಈ ಸಮಯದಲ್ಲಿ 600 ರಿಂದ 800 ರೂ, ದರ ಅಟ್ಟೆಗೆ ಇರುತ್ತದೆ ಎಂದು ಬೆಳೆಗಾರರು ತಿಳಿಸಿದ್ದಾರೆ.

ಗಿಡಗಳಲ್ಲಿ ಉತ್ತಮ ಇಳುವರಿ: ಎಲ್ಲ ಗಿಡಗಳಲ್ಲಿ ಈ ವರ್ಷ ಉತ್ತಮ ಇಳುವರಿ ಬಂದಿದೆ. ಪ್ರತೀ ವರ್ಷ ಈ ಸಮಯ ಒಳ್ಳೆಯ ಇಳುವರಿ ಇರುತ್ತೆ. ಮಾರುಕಟ್ಟೆಗೆ ಪೂರೈಕೆ ಸಾಧ್ಯವಿಲ್ಲದಿದ್ದರು ಹೂವನ್ನು ಕೊಯ್ಯುತ್ತಿದ್ದಾರೆ. ಹೂವನ್ನು ಗಿಡದಲ್ಲೇ ಬಿಟ್ಟರೆ ಮೊಗ್ಗು ತಿನ್ನುವ ಹುಳ ಗಿಡವನ್ನು ಆವರಿಸಿ ಚಿಗುರನ್ನು ತಿಂದು ಗಿಡಗಳನ್ನು ಹಾಳು ಮಾಡುತ್ತವೆ. ಹಾಗಾಗಿ ಹೂವುಗಳನ್ನು ಕೊಯ್ದು ದೇವರಿಗೆ, ಬಾಗಿಲಿಗೆ ಹಾಕುತ್ತಿದ್ದಾರೆ. ಮಾರುಕಟ್ಟೆಗೆ ಹೂವು ಇಲ್ಲದಿದ್ದರೂ ಬೆಳೆಗಾರರು ಸುಮ್ಮನೆ ಕೂತಿಲ್ಲ. ಮಲ್ಲಿಗೆ ಗಿಡವನ್ನು ಎಂದಿನಂತೆ ಆರೈಕೆ ಮಾಡುತ್ತಿದ್ದಾರೆ. ನೀರು ಹಾಕುವುದು, ತರಗೆಲೆ ಮುಚ್ಚುವುದು, ಕಳೆ ತೆಗೆಯುವುದು, ಹಟ್ಟಿಗೊಬ್ಬರ ಹಾಕುವ ಮೂಲಕ ನಿರ್ವಹಣೆ ಮಾಡುತ್ತಿದ್ದಾರೆ.

ಸೀಸನ್ ವಹಿವಾಟು ದಿನಕ್ಕೆ 1.60 ಲಕ್ಷ ರೂ!: ಜಿಲ್ಲೆಯಲ್ಲಿ 116 ಹೆಕ್ಟೇರ್ ಪ್ರದೇಶದಲ್ಲಿ ಪ್ರತೀ ವರ್ಷದ ಈ ಸೀಸನ್ ಸಮಯದಲ್ಲಿ ತಿಂಗಳುಗಳಲ್ಲಿ ಬೆಳೆಗಾರರು-ವ್ಯಾಪಾರಿಗಳು- ಗ್ರಾಹಕರ ನಡುವೆ 50 ಲಕ್ಷ ರೂ.ಅಂದಾಜು ವಹಿವಾಟು ನಡೆಯುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ. ದಿನಕ್ಕೆ ಅಂದಾಜು 1.50 ಲಕ್ಷ ರೂ.ನಿಂದ 1.70 ಲಕ್ಷ ರೂ.ವರೆಗೆ ವಹಿವಾಟು ನಡೆಯುತ್ತದೆ. ಜಿಲ್ಲೆಯಲ್ಲಿ 7 ಸಾವಿರ ಬೆಳೆಗಾರರಿದ್ದು, ಈ ಆದಾಯ ಮೂಲಕ್ಕೂ ಹೊಡೆತ ಬಿದ್ದಿರುವುದರಿಂದ ಮಲ್ಲಿಗೆ ಕೃಷಿಯನ್ನೇ ನೆಚ್ಚಿಕೊಂಡ ಕುಟುಂಬಗಳಿಗೆ ಸಮಸ್ಯೆಯಾಗಿದೆ.

ಜಾತ್ರೆ, ಉತ್ಸವ, ಶುಭ ಸಮಾರಂಭ ನಡೆಯುವ ಈ ಸಮಯದಲ್ಲಿ ಬೆಳೆಗಾರರಿಗೆ ಆದಾಯ ಬರುತ್ತದೆ. ಆದರೆ ಕರೊನಾ ವೈರಸ್, ಲಾಕ್‌ಡೌನ್ ಮಲ್ಲಿಗೆ ಬೆಳೆಗಾರರು, ಮಾರುಕಟ್ಟೆಯ ಮೇಲೆ ಪರಿಣಾಮ ಬೀರಿದೆ. ಇಳುವರಿ ಉತ್ತಮವಾಗಿದ್ದರೂ ಮಾರುಕಟ್ಟೆ ಇಲ್ಲದೆ ಆದಾಯ ಶೂನ್ಯ. ಮುಂದಿನ ದಿನಗಳಲ್ಲಿ ದುಡಿದು, ಸಂಪಾದಿಸಲು ಸಾಕಷ್ಟು ಕಾಲವಕಾಶವಿದೆ. ಮೊದಲು ಕರೊನಾ ವೈರಸ್ ದೇಶದಿಂದ ದೂರವಾಗಲಿ.

- ರಾಮಕೃಷ್ಣ ಶರ್ಮ ಬಂಟಕಲ್ಲು, ಮಲ್ಲಿಗೆ ಬೆಳೆಗಾರರು, ಕೃಷಿಕ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net