

ಹೊಸನಗರ: ಶ್ರೀ ರಾಮಚಂದ್ರಾಪುರ ಮಠದಲ್ಲಿ ಗೋವರ್ಧನ ಗಿರಿಧಾರಿ ಶ್ರೀ ಗೋಪಾಲಕೃಷ್ಣ ದೇಗುಲದಲ್ಲಿ ಮಾ.4ರಂದು ನಡೆಯಲಿರುವ ಕೃಷ್ಣಾರ್ಪಣಂ ಕಾರ್ಯಕ್ರಮಕ್ಕೆ ಜಶೋದಾ ಬೆನ್ ಮೋದಿ ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮಾ.4 ರಂದು ನಡೆಯುವ ಧಾರ್ವಿುಕ ಕಾರ್ಯಕ್ರಮದ ವೇದಿಕೆ ಹಂಚಿಕೊಳ್ಳಲಿದ್ದು, ಗೋಪಾಲಕೃಷ್ಣ ದೇಗುಲದಲ್ಲಿ ನಡೆಯಲಿರುವ ವಿಷ್ಣು ಸಹಸ್ರನಾಮ ಪಠಣದ ವೇಳೆ ಛತ್ರ ಸಮರ್ಪಿಸಿ ಪ್ರಾರ್ಥನಾ ಗೀತೆ ಹಾಡಲಿದ್ದಾರೆ ಎಂದು ಶ್ರೀಮಠದ ಮೂಲಗಳು ತಿಳಿಸಿವೆ.
ಮಠದಲ್ಲಿ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದ್ದು, ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಖ್ಯಾತ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ನೇತೃತ್ವದಲ್ಲಿ ಕೃಷ್ಣಾರ್ಪಣಂ ಸಂಪನ್ನಗೊಳ್ಳಲಿದೆ.