ದೇಶ ಕಾಯಲು ಸೈನಿಕರಿದ್ದಾರೆ,  ಕಾಂಗ್ರೆಸ್ ಬಿಜೆಪಿಯ ಯಾರೂ ಹೋಗಲ್ಲ,  ಸಚಿವ ಸತೀಶ ಜಾರಕಿಹೊಳಿ ಮಾರ್ಮಿಕ ನುಡಿ

Published on

ಹುಬ್ಬಳ್ಳಿ: ದೇಶವನ್ನು ಸಂರಕ್ಷಣೆ ಮಾಡಲು 22 ಲಕ್ಷ ಸೈನಿಕರಿದ್ದಾರೆ, ಅವರು ತಮ್ಮ ಕೆಲಸ ಮಾಡುತ್ತಾರೆ, ಬೇಕಿದ್ದರೆ ಅವರೇ ಬಾಂಬ್ ಹಾಕುತ್ತಾರೆ. ಹಾಗಾಗಿ ಬಿಜೆಪಿಯವರಾಗಲಿ, ಕಾಂಗ್ರೆಸ್ ನವರಾಗಲಿ ಯಾರೂ ಹೋಗುವುದಿಲ್ಲ, ಬರೀ ಮಾತನಾಡುತ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನ ವಿರುದ್ಧ ಯುದ್ಧಕ್ಕೆ ನಾನೇ ಹೋಗುತ್ತೇನೆ… ಎಂದು ಕೆಲ ಸಚಿವರು ಹೇಳಿಕೊಂಡ ಹಿನ್ನೆಲೆಯಲ್ಲಿ ಈ ಪ್ರತಿಕ್ರಿಯೆ ನೀಡಿದರು. ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಕೇಂದ್ರಕ್ಕೆ ಅದರದೇ ಆದ ರಣನೀತಿ ಇದೆ. ಅದು ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದರು.

ಮಂಗಳೂರು ಘಟನೆಗೆ ಸಂಬಂಧಿಸಿ ಪೊಲೀಸರು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಫ್ರೀ ಹ್ಯಾಂಡ್ ಇಲ್ಲದೇ ಇದ್ದಿದ್ದರೆ ಪೊಲೀಸರಿಗೆ ಅಷ್ಟು ಜನರನ್ನು ಬಂಧಿಸಲು ಸಾಧ್ಯವಾಗುತ್ತಿತ್ತೇ? ಎಂದು ಪ್ರಶ್ನಿಸಿದರು.

ನೀಟ್ ಪರೀಕ್ಷೆ ಸಂದರ್ಭದಲ್ಲಿ ಮತ್ತೆ ಕೆಲವೆಡೆ ಜನಿವಾರ, ಆಭರಣ ತೆಗೆಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಜಾರಕಿಹೊಳಿ ಅವರು, ಕೆಲ ಖಾಸಗಿ ಕಾಲೇಜುಗಳಲ್ಲಿ ಹೀಗೆ ಆಗಿರಬಹುದು. ಸರ್ಕಾರಕ್ಕೆ ಕೆಟ್ಟ ಹೆಸರು ತರುವುದು, ಈ ವಿಚಾರದಲ್ಲಿ ರಾಜಕೀಯ ಮಾಡುವುದು ಇದ್ದದ್ದೆ. ಆದರೆ, ಸರ್ಕಾರವು ಸಮಗ್ರವಾಗಿ ಪರಿಶೀಲಿಸಲಿದೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಯಲ್ಲಿ ಬಿಲ್ ಪಾವತಿ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಸಣ್ಣ ಅಥವಾ ದೊಡ್ಡ ಗುತ್ತಿಗೆದಾರರು ಎಂಬ ಭೇದ ಇಲ್ಲ. ಎಲ್ಲರಿಗೂ ಸಮಾನವಾಗಿ ನೋಡಲಾಗುತ್ತದೆ ಎಂದರು.

ಬಿಜೆಪಿ ಯೂಟರ್ನ್:
ಜಾತಿ ಗಣತಿ ವಿಚಾರದಲ್ಲಿ ಬಿಜೆಪಿ ಏಕಾಏಕಿ ಯೂಟರ್ನ ಹೊಡೆದಿದೆ. ರಾಜ್ಯ ಸರ್ಕಾರ ಜಾತಿ ಗಣತಿ ವರದಿ ಸ್ವೀಕರಿಸಿದಾಗ ವಿರೋಧ ಮಾಡಿತ್ತು. ಈಗ ಕೇಂದ್ರ ಸರ್ಕಾರ ಜಾತಿ ಜನಗಣತಿ ಬಗ್ಗೆ ಹೇಳಿದಾಗ ದೂರದೃಷ್ಟಿಯ ಆಲೋಚನೆ ಎಂದು ಹೇಳಿಕೊಳ್ಳುತ್ತಿದೆ. ಇಬ್ಬಗೆಯ ನೀತಿ ಏಕೆ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಯವರು ಜಾತಿ ಗಣತಿ ವರದಿ ಕುರಿತು ಮೇ 9ರಂದು ಸಭೆ ಕರೆದಿದ್ದಾರೆ. ಲಿಖಿತ ಆಕ್ಷೇಪಣೆ ಸಲ್ಲಿಸಲು ಹೇಳಿದ್ದಾರೆ. ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರುತ್ತೇವೆ. ನಮ್ಮ ಅಭಿಪ್ರಾಯ ತಿಳಿಸುತ್ತೇವೆ. ಸರ್ಕಾರ ಮಾಡಿದ್ದೆಲ್ಲವನ್ನೂ ಒಪ್ಪಿಕೊಳ್ಳಬೇಕೆಂದಿಲ್ಲ. ತಿರಸ್ಕಾರ ಮಾಡುವ ಅಧಿಕಾರ ಇದೆ ಎಂದರು.

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಈಗ ಯಾವುದೇ ಚರ್ಚೆ ನಡೆದಿಲ್ಲ. ಬದಲಾವಣೆ ಏನೇ ಇದ್ದರೂ ಅದನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಕೆಪಿಎಸ್ಸಿ ಪರೀಕ್ಷೆಯಲ್ಲಿನ ಗೊಂದಲ ಎಲ್ಲ ಸರ್ಕಾರಗಳಲ್ಲೂ ಆಗಿವೆ. ಅದನ್ನು ಸರಿಪಡಿಸುವ ಕೆಲಸವನ್ನು ಆಯೋಗ ಮಾಡಬೇಕು. ಅದು ಸ್ವತಂತ್ರ ಸಂಸ್ಥೆಯಾಗಿದೆ ಎಂದು ಉತ್ತರಿಸಿದರು.

ಘೋಷಣೆ ಕೂಗಿದ ಬೆಂಬಲಿಗರು:
ಸಚಿವ ಸತೀಶ ಜಾರಕಿಹೊಳಿ ಅವರನ್ನು ವಿಮಾನ ನಿಲ್ದಾಣದಲ್ಲಿ ಅವರ ಬೆಂಬಲಿಗರು, ಮುಖಂಡರು, ಕಾರ್ಯಕರ್ತರು ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು. ಸಚಿವರು ಅಲ್ಲಿಂದ ತೆರಳುತ್ತಿದ್ದಾಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಜಾರಕಿಹೊಳಿ ಅವರಿಗೆ ಎಂದು ಘೋಷಣೆ ಕೂಗಿದರು. ಕೆಪಿಸಿಸಿ ನೂತನ ಸಾರಥಿ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಈ ಘೋಷಣೆ ಗಮನ ಸೆಳೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net