ಜಾರಕಿಹೊಳಿ ಉಚ್ಚಾಟನೆಗೆ ಕಾಂಗ್ರೆಸ್ ಕಾರ್ಯಕರ್ತರ ಒತ್ತಾಯ

3Ravig2-Web
ರಮೇಶ ಅವರನ್ನು ಬಿಜೆಪಿಯಿಂದ ಉಚ್ಚಾಟಿಸುವಂತೆ ಒತ್ತಾಯಿಸಿ ಬೆಳಗಾವಿ ಡಿಸಿ ಕಚೇರಿ ಬಳಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿದರು. ಸಿ.ಸಿ.ಪಾಟೀಲ, ಅಡಿವೇಶ ಇಟಗಿ, ಸುರೇಶ ಪಾಟೀಲ, ಗಾಯತ್ರಿ ಪಾಟೀಲ ಸೇರಿದಂತೆ ಅನೇಕ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.
Published on

ಬೆಳಗಾವಿ: ಸೆಕ್ಸ್ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ ಜಾರಕಿಹೊಳಿ ಅವರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟಿಸಿದರು.

ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಕಾಂಗ್ರೆಸ್ ಭವನದಿಂದ ಚನ್ನಮ್ಮ ವೃತ್ತದವರೆಗೆ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಬೆಳಗಾವಿ ತಾಪಂ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಶ್ರೀರಾಮನ ಹೆಸರು ಹೇಳುತ್ತ ರಾಕ್ಷಸ ಕೆಲಸ ಮಾಡುತ್ತಿರುವ ಬಿಜೆಪಿಯವರಿಗೆ ಮಾನ, ಮರ್ಯಾದೆ ಇದ್ದರೆ ಕೂಡಲೇ ರಮೇಶ ಜಾರಕಿಹೊಳಿ ಅವರನ್ನು ಪಕ್ಷದಿಂದಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

‘ರಮೇಶ ಜಾರಕಿಹೊಳಿ ಹಠಾವೋ, ಬೆಳಗಾವಿ ಬಚಾವೋ’ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯುವತಿಯೋರ್ವಳಿಗೆ ಕೆಲಸ ಕೊಡಿಸುವುದಾಗಿ ರಮೇಶ ಲೈಂಗಿಕವಾಗಿ ಬಳಸಿಕೊಂಡು, ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿದೆ. ಮಹಿಳೆಯರಿಗೆ ಆಮಿಷವೊಡ್ಡಿ ದೌರ್ಜನ್ಯ ಎಸಗಿರುವ ಅವರಿಗೆ ನಾಚಿಕೆಯಾಗಬೇಕು. ಅವರ ಪ್ರಧಾನಿ, ‘ಬೇಟಿ ಬಚಾವೋ, ಬೇಟಿ ಪಡಾವೋ’ ಎಂದು ಹೇಳುತ್ತಾರೆ. ಆದರೆ, ಉಸ್ತುವಾರಿ ಸಚಿವರ ನಾಚಿಕೆಗೇಡಿನ ಕೃತ್ಯದಿಂದ ನಮ್ಮ ಜಿಲ್ಲೆಯ ಮಾನ, ಮರ್ಯಾದೆ ಕಳೆದುಹೋಗಿದೆ. ಮತ್ತೆ ಅಧಿಕಾರದಲ್ಲಿ ಮುಂದುವರಿಯಲು ಅವರಿಗೆ ಯಾವುದೇ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಮುಖಂಡರಾದ ಸಿ.ಸಿ. ಪಾಟೀಲ, ಅಡಿವೇಶ ಇಟಗಿ, ಸುರೇಶ ಪಾಟೀಲ, ಗಾಯತ್ರಿ ಪಾಟೀಲ, ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net