ಜಪ್ಪು-ಮಹಾಕಾಳಿಪಡ್ಪು-ಮೋರ್ಗನ್ಸ್‌ಗೇಟ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಿಲಾನ್ಯಾಸ

Published on

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಜಪ್ಪುವಿನಿಂದ ಮೋರ್ಗನ್ಸ್ ಗೇಟ್ ಜಂಕ್ಷನ್ ವರೆಗೆ ಮಹಾಕಾಳಿಪಡ್ಪುವಿನಲ್ಲಿ ಆರ್‌ಯುಬಿ ಮೂಲಕ ರಸ್ತೆ ನಿರ್ಮಾಣ ಕಾಮಗಾರಿಗೆ ಭಾನುವಾರ ಸಂಸದ ನಳಿನ್ ಕುಮಾರ್ ಕಟೀಲ್ ಶಿಲಾನ್ಯಾಸ ನೇರವೇರಿಸಿದರು.
ಬಳಿಕ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಪ್ರತಿ ಮೂರು ತಿಂಗಳಿಗೊಮ್ಮೆ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿದ ಪರಿಣಾಮ ಕಾಮಗಾರಿಗೆ ಚಾಲನೆ ನೀಡಲು ಸಾಧ್ಯವಾಗಿದೆ. 30 ವರ್ಷದ ಈ ಭಾಗದ ಜನರ ಬೇಡಿಕೆ ಈಡೇರಿದೆ. ಕಳೆದ ಅವಧಿಯಲ್ಲಿ ಜಿಲ್ಲೆಗೆ 16 ಸಾವಿರ ಕೋಟಿ ಅನುದಾನ ಕೇಂದ್ರ ಸರ್ಕಾರ ಒದಗಿಸಿದ್ದು, ಈ ಬಾರಿ ಎರಡು ವರ್ಷದಲ್ಲಿ 7 ಸಾವಿರ ಕೋಟಿ ರೂ ಅನುದಾನ ಬಂದಿದೆ ಎಂದರು.

ಒಟ್ಟು 49.95 ಕೋಟಿ ರೂ ವೆಚ್ಚದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಮತ್ತು ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಿಂದ ಕಾಮಗಾರಿ ನಡೆಯಲಿದೆ. 30.07 ಕೋಟಿ ರೂ. ವೆಚ್ಚದಲ್ಲಿ ಆರ್‌ಯುಬಿ ಮತ್ತು 19.87 ಕೋಟಿ ರೂ.ವೆಚ್ಚದಲ್ಲಿ ಸಂಪರ್ಕ ರಸ್ತೆ ನಿರ್ಮಾಣವಾಗಲಿದೆ.
ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಳಾ ರಾವ್, ಮುಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net