

ಮಂಗಳೂರು: ಜಪ್ಪಿನಮೊಗರಿನ ಕಡೆಕಾರು ಶ್ರೀ ಮಲ್ಲಿಕಾರ್ಜುನ ದೇವಳ ಸಮುಚ್ಚಯದ ಗುರುವನ ಶ್ರೀ ದುರ್ಗಾ ಕ್ಷೇತ್ರದ 13ನೇ ಪ್ರತಿಷ್ಠಾ ವಧರ್ಂತಿ ಮತ್ತು ವರ್ಷಾವಧಿ ಉತ್ಸವದಂದು ಕಳೆದ 13 ವರ್ಷಗಳಿಂದ ಕ್ಷೇತ್ರದ ಎಲ್ಲಾ ಕಾರ್ಯಕ್ರಮಗಳಲ್ಲಿ ಸ್ವಯಂ ಸೇವಕರಾಗಿ ಕರ ಸೇವೆ ಸಲ್ಲಿಸಿದವರನ್ನು ಗೌರವಿಸಲಾಯಿತು.
ಕರ ಸೇವಕರನ್ನು ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಸನ್ಮಾನಿಸಿದರು.
ಈ ವೇಳೆ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್, ನಿಜಕ್ಕೂ ನಿಸ್ವಾರ್ಥವಾಗಿ ದುಡಿದವರನ್ನು ಗುರುತಿಸಿ ಗೌರವಿಸಿರುವುದು ಉತ್ತಮ ಕಾರ್ಯ ಎಂದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಎಲ್ಲಾ ಕರ ಸೇವಕರಿಗೂ ಅಭಿನಂದನೆಗಳು. ಹಣದಿಂದ ನೆಮ್ಮದಿ ಕಾಣುವುದಲ್ಲ, ಫಲಾಪೇಕ್ಷೆ ಇಲ್ಲದೆ ದೇವರ ಸೇವೆ ಮಾಡಿ ಅದರಿಂದ ನೆಮ್ಮದಿ ಕಾಣಬಹುದು ಎಂಬ ಸಂದೇಶವನ್ನು ತಾವು ಸಾರಿದ್ದೀರಿ ಎಂದರು.
ಮಾಜಿ ಸಚಿವ ಕೃಷ್ಣ.ಜೆ.ಪಾಲೇಮಾರ್ ಮಾತನಾಡಿ ನಮ್ಮ ಸಂಸ್ಕೃತಿ, ಸಂಸ್ಕಾರ ಕೇಂದ್ರವಾಗಿ ದೈವ ದೇವಸ್ಥಾನ ಗಳು ಇದ್ದು ಇದರ ಅಭಿವೃದ್ಧಿಗೆ ,ಕ್ಷೇತ್ರದಲ್ಲಿ ಸೇವೆ ಮಾಡುವ ಸರ್ವರಿಗೂ ದೇವರು ಸನ್ಮಂಗಳವನ್ನುಂಟು ಮಾಡಲೆಂದು ಹಾರೈಸಿದರು. ಕ್ಷೇತ್ರದ ಅಧ್ಯಕ್ಷರಾದ ಯೋಗೀಶ್ ಕುಮಾರ್ ಜೆಪ್ಪು, ಕ್ಷೇತ್ರದ ಪ್ರಧಾನ ಅರ್ಚಕರು ಹಾಗೂ ಟ್ರಸ್ಟಿಗಳು ಉಪಸ್ಥಿತರಿದ್ದರು.