ರಾಸಾಯನಿಕ ತ್ಯಾಜ್ಯ ನೀರು ನಿರ್ವಹಣೆಗೆ ಜಪಾನೀಸ್​ ತಂತ್ರಜ್ಞಾನ

BWSSB
Published on

ಬೆಂಗಳೂರು: ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಉತ್ಪತ್ತಿಯಾಗುತ್ತಿರುವ ರಾಸಾಯನಿಕ ತ್ಯಾಜ್ಯ ನೀರನ್ನು ಜಪಾನೀಸ್​ ಆಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ವಿಶ್ವದ ಪ್ರಮುಖ ಪರಿಸರ ಸ್ನೇಹಿ ಕೈಗಾರಿಕಾ ಪ್ರದೇಶವನ್ನಾಗಿಸಲು ಜಲಮಂಡಳಿ ಮುಂದಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್​ ಪ್ರಸಾತ್​ ಮನೋಹರ್​ ತಿಳಿಸಿದ್ದಾರೆ.

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಜಲಮಂಡಳಿ ವತಿಯಿಂದ ವಿಶೇಷವಾಗಿ ಆಹ್ವಾನಿಸಲಾಗಿದ್ದ ಜಪಾನ್​ ಮೂಲದ ತಂತ್ರಜ್ಞಾನ ಸಂಸ್ಥೆಯ ಪ್ರತಿನಿಧಿಯೊಂದಿಗೆ ಬುಧವಾರ ಚರ್ಚಿಸಿ ಮಾಹಿತಿ ನೀಡಿದರು.

ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಹಲವಾರು ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳು ಸ್ವಂತ ಸಂಸ್ಕರಣಾ ವ್ಯವಸ್ಥೆ ಹೊಂದದೆ, ವಿವಿಧ ಮಾರ್ಗ ಬಳಸಿಕೊಂಡು ತ್ಯಾಜ್ಯ ನೀರು ವಿಲೇವಾರಿ ಮಾಡುತ್ತಿವೆ. ಸಂಸ್ಕರಣೆ ಇಲ್ಲದೆ ಭೂಮಿಗೆ ಸೇರುವ ಕಲುಷಿತ ನೀರಿನಿಂದ ಜಲಮೂಲಗಳು ಕಲುಷಿತವಾಗುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಅತ್ಯಾಧುನಿಕ ಜಪಾನೀಸ್​ ತಂತ್ರಾನದ ಮೊಬೈಲ್​ ಇ.ಟಿ.ಪಿ ಅಳವಡಿಸಲು ಜಲಮಂಡಳಿ ಮುಂದಾಗಿದೆ. ಈ ಮೊಬೈಲ್​ ಇ.ಟಿ.ಪಿ ಕೈಗಾರಿಕೆಗಳ ಬಾಗಿಲಿನಲ್ಲೆ ರಾಸಾಯನಿಕ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಿದ್ದು, ಸಂಸ್ಕರಿಸಿದ ನೀರನ್ನು ಮರುಬಳಕೆಗೆ ಕೈಗಾರಿಕೆಗಳಿಗೆ ಮರಳಿ ನೀಡಲಿದೆ. ಇದರಿಂದ ಕೈಗಾರಿಕೆಗಳಿಗೆ ನೀರಿನ ವೆಚ್ಚದಲ್ಲಿ ಉಳಿತಾಯವಾಗುತ್ತದೆ ಎಂದರು.

ಈ ತಂತ್ರಜ್ಞಾನದ ಪ್ರದರ್ಶನ ಏ.23 ರಂದು ಆಯೋಜಿಸಲಾಗುವುದು. ಮೂರು ದಿನಗಳ ಕಾಲ ವಿವಿಧ ಕೈಗಾರಿಕಾ ಕೇಂದ್ರಗಳಿಗೆ ತೆರಳಿ ಮೊಬೈಲ್​ ಇ.ಟಿ.ಪಿ ಯಿಂದಾಗುವ ಅನುಕೂಲತೆ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಲಾಗುತ್ತದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net