ಜವಳಿ ಸಚಿವರಿಗೆ ಜಪಾನ್ ಮೇಡ್ ಪ್ರೀತಿ

Srimant
Published on

ಬೆಂಗಳೂರು: ರಾಜ್ಯ ಸರ್ಕಾರದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ- ಖಾತೆ ಹಂಚಿಕೆಯಾಗಿ ನಿಧಾನವಾಗಿ ಗೊಂದಲ ಗೋಜಲು ಬದಿಗೆ ಸರಿಯುತ್ತಿದೆ. ಇದೇ ವೇಳೆ ಹೊಸದಾಗಿ ಸಚಿವ ಸ್ಥಾನ ಅಲಂಕರಿಸಿದವರ ಹೇಳಿಕೆ, ನಡವಳಿಕೆಗಳು ಒಂದಷ್ಟು ಚರ್ಚೆಗೂ ಗ್ರಾಸವಾಗುತ್ತಿದೆ.

ಇದೀಗ ಹೊಸ ಸಚಿವರು ಜಪಾನ್ ಮೇಡ್ ಇಂಜಿನ್ ಕಾರನ್ನು ಹುಡುಕಿದ ಪ್ರಸಂಗವೊಂದು ನಡೆದಿದೆ. ಮೈತ್ರಿ ಸರ್ಕಾರದ ಪತನದ ವೇಳೆ ನಡೆದ ಹೈಡ್ರಾಮದಲ್ಲಿ ಹೃದಯ ಬೇನೆ ಎಂದು ಆಸ್ಪತ್ರೆ ಸೇರಿ ಸುದ್ದಿಯಾಗಿದ್ದ ಕಾಗವಾಡ ಕ್ಷೇತ್ರದ ‘ಅರ್ಹ’ ಶಾಸಕ, ಜವಳಿ ಸಚಿವರೂ ಆದ ಶ್ರೀಮಂತ ಪಾಟೀಲ್ ಅವರಿಗೆ ‘ಜಪಾನ್ ಮೇಡ್’ ಇಂಜಿನ್ ಮೇಲೆ ಅದೇನೋ ಸ್ಪೆಷಲ್ ಲವ್! ಸಚಿವ ಸ್ಥಾನ ಅಲಂಕರಿಸಿದ ಬಳಿಕ ಸರ್ಕಾರ ಅವರಿಗೆ ಓಡಾಡಲು ಇನ್ನೋವಾ ಕಾರು ನೀಡಿತ್ತು. 2015ನೇ ಮಾಡೆಲ್ ನ ಕೆಎ 51 ಜಿ 9333 ನಂಬರ್ ನ ಇಂಡಿಯನ್ ಮೇಡ್ ಎಂಜಿನ್ ಹೊಂದಿದ ಇನ್ನೋವಾ ಹಂಚಿಕೆ ಮಾಡಲಾಗಿತ್ತು. ಆದರೆ, ಸಚಿವರಿಗೆ ಅದೇಕೋ ಈ ಇಂಡಿಯನ್ ಮೇಡ್ ಇಂಜಿನ್ ಇಷ್ಟವಾಗಲಿಲ್ಲ. ಜಪಾನ್ ಮೇಡ್ ಇಂಜಿನ್ ಕಾರೇ ಬೇಕೆಂದು ಹುಡುಕಾಟ ನಡೆಸಿದರು. ಸಚಿವರ ಅಪೇಕ್ಷೆಯಂತೆ ಅಧಿಕಾರಿಗಳಿಗೆ ಕೊನೆಗೂ 2013ರ ಮಾಡೆಲ್​ನ ಜಪಾನ್ ಮೇಡ್ ಇನ್ನೋವಾ ಕಾರು ಸಿಕ್ಕಿದೆ.

ವಿಷಯ ತಿಳಿಯುತ್ತಿದ್ದಂತೆ ಖುದ್ದು ಕುಮಾರಕೃಪಾ ಅತಿಥಿಗೃಹಕ್ಕೆ ಆಗಮಿಸಿದ ಅವರು 2013ನೇ ಮಾಡೆಲ್ ನ ಕೆಎ 05 ಜಿಎ 9 ನೋಂದಣಿಯ ಕಾರನ್ನು ಪಡೆದುಕೊಂಡಿದ್ದಾರೆ. ಅಂದಹಾಗೆ ಜಪಾನ್ ಮೇಡ್ ಇಂಜಿನ್​ನ ಕಾರು ಹೆಚ್ಚು ಭಾರ ತಡೆಯುತ್ತದಂತೆ, ಓಡಾಟಕ್ಕೂ ಕಂಫರ್ಟ್ ಅಂತೆ, ಹೆಚ್ಚು ಶಬ್ದ ಇರುವುದಿಲ್ಲ ಎಂದು ಪಾಟೀಲ್ ಹೇಳಿಕೊಂಡಿದ್ದಾರೆ.

ಸಿಎಂ ಜತೆ ರಮೇಶ್, ಬಾಲಚಂದ್ರ ಚರ್ಚೆ

ಜಾರಕಿಹೊಳಿ ಸಹೋದರರು ಶನಿವಾರ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಕೆಲವು ಪ್ರಮುಖ ವಿಚಾರಗಳನ್ನು ಚರ್ಚೆ ಮಾಡಿರುವುದು ಬಿಜೆಪಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಚಿವ ರಮೇಶ್ ಜಾರಕಿಹೊಳಿ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶನಿವಾರ ಬೆಳಗ್ಗೆಯೇ ಬಿಎಸ್​ವೈ ನಿವಾಸಕ್ಕೆ ತೆರಳಿ ಕೆಲ ಬೇಡಿಕೆಗಳನ್ನು ಮಂಡಿಸಿದರು. ಶಾಸಕ ಮಹೇಶ್ ಕುಮಠಳ್ಳಿ ಅವರಿಗೆ ಎಂಎಸ್​ಐಎಲ್ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಇದನ್ನು ಕೂಡಲೇ ಬದಲಾವಣೆ ಮಾಡಿ, ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಬೇಕು. ಅವರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲದ ಕಾರಣ ಉತ್ತಮ ನಿಗಮಕ್ಕೆ ಅವಕಾಶ ನೀಡಿ ಎಂದು ಒತ್ತಾಯ ಮಾಡಿದ್ದಾರೆ. ಜತೆಗೆ ರಮೇಶ್ ಜಾರಕಿಹೊಳಿ ಅವರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿ ನಿವೃತ್ತ ಅಧಿಕಾರಿ ರುದ್ರಯ್ಯ ಅವರನ್ನು ನೇಮಕ ಮಾಡಿಕೊಳ್ಳಲು ಅನುಮತಿ ನೀಡಬೇಕೆಂದು ಕೋರಿದ್ದಾರೆ. ಬೇಡಿಕೆಗಳನ್ನು ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ.

ಸಿಎಂ ನನಗೆ 3 ಖಾತೆ ಕೊಟ್ಟಿದ್ದಾರೆ. ಒಳ್ಳೆ ಖಾತೆಗಳನ್ನೇ ಕೊಟ್ಟಿದ್ದಾರೆ. ಇದಕ್ಕಾಗಿ ಅವರಿಗೆ ಅಭಿನಂದಿಸುತ್ತೇನೆ. ನನಗೆ ಅಸಮಾಧಾನ ಇದೆ. ರಾಜೀನಾಮೆ ಕೊಟ್ಟಿದ್ದೇನೆ ಎಂಬುದು ಜೆಡಿಎಸ್​ನವರು ಹಬ್ಬಿಸಿರುವ ವದಂತಿ. | ನಾರಾಯಣ ಗೌಡ ಪೌರಾಡಳಿತ, ರೇಷ್ಮೆ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net