

ತೆಲಸಂಗ: ಜ.4ರಂದು ಗ್ರಾಮಕ್ಕೆ ಸಿದ್ದೇಶ್ವರ ಶ್ರೀಗಳು ಆಗಮಿಸುತ್ತಿದ್ದು, ಗ್ರಾಮದ ಪ್ರತಿಯೊಬ್ಬರೂ ಸೇವಾ ಕಾರ್ಯದಲ್ಲಿ ಪಾಲ್ಗೊಂಡು ಪೂಜ್ಯರ ಪ್ರವಚನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮಲ್ಲಪ್ಪ ವಮನಸ ಹೇಳಿದ್ದಾರೆ.
ಗ್ರಾಮದ ಹನುಮ ದೇವಸ್ಥಾನದ ಕಟ್ಟಡ ಉದ್ಘಾಟನೆ, ಮೂರ್ತಿ ಪ್ರಾಣಪ್ರತಿಷ್ಠಾಪನೆ, ಕಳಸಾರೋಹಣದ ನಿಮಿತ್ತ ಹಮ್ಮಿಕೊಂಡ ಸಭೆಯಲ್ಲಿ ಅವರು ಮಾತನಾಡಿ, ಜ.1ರಿಂದ 8ರ ವರೆಗೆ ನಿತ್ಯ ಸಂಜೆ 6 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಪ್ರವಚನ ಹಾಗೂ ಕೀರ್ತನೆ ಕಾರ್ಯಕ್ರಮ ಜರುಗಲಿವೆ. ಅಂದಾನಿ ಶಾಸ್ತ್ರಿಗಳು ಮಹಾತ್ಮರ ಬದುಕು ಮತ್ತು ಬೆಳಕು ವಿಷಯವಾಗಿ ಪ್ರವಚನ, ಹಳ್ಳೂರು ಗ್ರಾಮದ ಬಸವರಾಜ ಮಹಾರಾಜರು ರಾಮಾಯಣ ವಿಷಯವಾಗಿ ಕೀರ್ತನೆ ಹೇಳುವರು. ಜ.4ರಂದು ಬೆಳಗ್ಗೆ 11ಗಂಟೆಗೆ ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿಗಳಿಂದ ವಿಶೇಷ ಪ್ರವಚನ ಹಾಗೂ ಅನ್ನಪ್ರಸಾದ ಸೇವೆ ಜರುಗಲಿವೆ. 8ರಂದು ಬೆಳಗ್ಗೆ 6ಗಂಟೆಗೆ ಮೂರ್ತಿ ಪ್ರತಿಷ್ಠಾಪನೆ, ಹೋಮ- ಹವನ, ಸುಮಂಗಲೆಯರಿಂದ ಕುಂಭಮೇಳ, ಹನುಮಾನ ಬೆಳ್ಳಿ ಮೂರ್ತಿ, ಕಳಸ ಮೆರವಣಿಗೆ ಜರುಗಲಿದೆ. ಶಿರಹಟ್ಟಿಯ ಜಗದ್ಗರು ಫಕೀರ ಸಿದ್ಧರಾಮ ಶ್ರೀಗಳು, ಬಿಳ್ಳೂರ ಮುರುಘೇಂದ್ರ ಶ್ರೀಗಳು, ಇಂಗಳೇಶ್ವರದ ಚನ್ನಬಸವ ಶ್ರೀಗಳು, ಅಥಣಿಯ ಶಿವಬಸವ ಶ್ರೀಗಳು, ಅಥಣಿಯ ಪ್ರಭು ಚನ್ನಬಸವ ಶ್ರೀಗಳು, ಇಂಚಗೇರಿ ಮಠದ ರೇವಣಸಿದ್ದೇಶ್ವರ ಶ್ರೀಗಳು, ಅಥಣಿಯ ಮರುಳಸಿದ್ಧ ಶ್ರೀಗಳು, ತಿಕೋಟಾದ ಮಲ್ಲಿಕಾರ್ಜುನ ಶ್ರೀಗಳು, ಕವಲಗುಡ್ಡದ ಅಮರೇಶ್ವರ ಶ್ರೀಗಳು, ತೆಲಸಂಗದ ಬಸವಗುಂಡಯ್ಯ ಶ್ರೀಗಳು, ಕಕಮರಿಯ ಆತ್ಮಾರಾಮ ಶ್ರೀಗಳು, ವೀರೇಶ್ವರ ದೇವರು, ಬಾಬುರಾವ ಮಹಾರಾಜರು ಭಾಗವಹಿಸಲಿದ್ದಾರೆ ಎಂದು ವಮನಸ ಮಾಹಿತಿ ನೀಡಿದರು.