

ಶೃಂಗೇರಿ: ಬ್ರಹ್ಮೋಪದೇಶ ಪಡೆದವರು ಶಾಸ್ತ್ರೋಕ್ತವಾಗಿ ಜನಿವಾರವನ್ನು ಸಪ್ತ ಋಷಿಗಳಿಗೆ ತರ್ಪಣ ನೀಡಿ ನಂತರ ಯಜ್ಞೋಪವೀತವನ್ನು ಧರಿಸುವುದೇ ಉಪಾಕರ್ಮ ಎಂದು ಆನೆಗುಂದ ಶ್ರೀ ವೇಣುಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಅರ್ಚಕ ವಸಂತ ಭಟ್ ಹೇಳಿದರು.
ಆನೆಗುಂದದ ಅಗ್ರಹಾರದಲ್ಲಿ ಮಂಗಳವಾರ ಏರ್ಪಡಿಸಿದ್ದ ಉಪಾಕರ್ಮ ಕಾರ್ಯಕ್ರಮದಲ್ಲಿ ಮಾತನಾಡಿ, ಸಾಧಾರಣವಾಗಿ ಎಲ್ಲ ವಸ್ತುಗಳಿಗೆ ನಿರ್ದಿಷ್ಟ ಅವಧಿ ಇರುತ್ತದೆ. ಅವಧಿ ಮುಗಿದಾಗ ಅದನ್ನು ಬದಲಿಸುವುದು ಜಗದ ನಿಯಮ. ಕಾಲ ಕಾಲಕ್ಕೆ ಅನುಗುಣವಾಗಿ ನಮ್ಮ ಬಟ್ಟೆ, ಗೃಹೋಪಯೋಗಿ ವಸ್ತುಗಳು, ವಾಹನ ಇತ್ಯಾದಿಯನ್ನು ಹೊಸದರೊಂದಿಗೆ ಬದಲಾಯಿಸುತ್ತೇವೆ. ಜನಿವಾರವನ್ನು ಸೂತಕದ ಹೊರತಾಗಿ ವರ್ಷಕೊಮ್ಮೆ ಬದಲಿಸುವ ಸಂಪ್ರದಾಯವೇ ಉಪಾಕರ್ಮವಾಗಿದೆ ಎಂದರು.
ತಾಲೂಕಿನ ವಿವಿಧೆಡೆ ಉಪಾಕರ್ಮ-ಮಠದ ಪ್ರವಚನ ಮಂದಿರ, ಬೆಟ್ಟದ ಶ್ರೀ ಮಲಹಾನಿಕರೇಶ್ವರ ಸ್ವಾಮಿ ದೇವಸ್ಥಾನ, ಕೊಡೂರು ಶ್ರೀ ಈಶ್ವರ ದೇವಸ್ಥಾನದಲ್ಲಿ, ಹೆಗ್ಗದ್ದೆ ಶ್ರೀ ಅನಂತಪದ್ಮನಾಭ ದೇವಸ್ಥಾನ, ಕಾವಡಿ ಶ್ರೀ ಉಮಾಮಹೇಶ್ವರ ದೇವಸ್ಥಾನ, ಕೊಚ್ಚಾರು ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ, ಕಿಗ್ಗಾ ಶ್ರೀ ಋಷ್ಯಶೃಂಗಸ್ವಾಮಿ ದೇವಸ್ಥಾನ, ವಿಶ್ವಕರ್ಮ ಸಮುದಾಯ ಭವನ, ಜಿಎಸ್‌ಬಿ ಸಭಾಭವನ ಮುಂತಾದೆಡೆ ಋಗ್ವೇದ ಉಪಾಕರ್ಮ ನಡೆಯಿತು.
ವೇದಾಂತ ಶಿಬಿರದಲ್ಲಿ ಉಪಾಕರ್ಮ-ನಾಲ್ಕು ದಿನದಿಂದ ಕೆರೆಮನೆ ಶ್ರೀನಿಕೇತನ ದಿನೇಶ್ ಮನೆಯಲ್ಲಿ ನಡೆಯುತ್ತಿರುವ ವೇದಾಂತ ಶಿಬಿರದಲ್ಲೂ ಋಗ್ವೇದ ಉಪಾಕರ್ಮ ನಡೆಯಿತು.