

ನೆಲಮಂಗಲ : ಕ್ಷೇತ್ರದ ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು. ನಗರದ ತಾಲೂಕು ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಜನಸ್ಪಂದನ ಸಭೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಶ್ರಮಿಸಲಾಗುತ್ತಿದೆ. ಆದರೆ, ಇತ್ತೀಚೆಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡುವಾಗ ರೈತರು ಹಾಗೂ ಸಾರ್ವಜನಿಕರುಕಂದಾಯ ಇಲಾಖೆ ಹಾಗೂ ವಿವಿಧ ಇಲಾಖೆಯಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿದ್ದಾರೆ. ಹಾಗಾಗಿ ಜನಸ್ಪಂದನದ ಮೂಲಕ ಅಹವಾಲು ಸ್ವೀಕರಿಸಿ ತ್ವರಿತವಾಗಿ ಪರಿಶೀಲಿಸಿ ಮುಂದಿನ ಸಭೆಯೊಳಗಾಗಿ ಪರಿಹಾರ ಒದಗಿಸಬೇಕು. ಇಲ್ಲವಾದಲ್ಲಿ ಸೂಕ್ತ ದಾಖಲೆಯೊಂದಿಗೆ ಹಿಂಬರಹ ನೀಡುವಂತೆ ತಾಲೂಕುಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು. ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ.ಜಿ.ಬಿಂದು, ಬಿಇಒ ರಮೇಶ್, ನಗರಸಭೆ ಅಧ್ಯಕ್ಷ ಎನ್.ಗಣೇಶ್, ನೆ.ಯೋ.ಪ್ರಾಧಿಕಾರ ಅಧ್ಯಕ್ಷ ನಾಗರಾಜ, ಸದಸ್ಯ ವೆಂಕಟೇಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಆರ್. ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ. ಪ್ರದಿಪ್ ಮಂಜುನಾಥ್, ವಕೀಲ ನಾರಾಯಣ ಗೌಡ, ಮುಖಂಡ ಮುನಿಯಪ್ಪ, ಜಿ.ಮಾರಯ್ಯ, ರಘುನಾಥ್ ಸಿ.ಎಂ.ಗೌಡ, ಚಿಕ್ಕಣ್ಣ, ಪ್ರಕಾಶ್ಬಾಬು, ಕೆಂಪರಾಜು, ನರಸಿಂಹಮೂರ್ತಿ, ಮನು ಕಾಚನಹಳ್ಳಿ ಇತರರು ಇದ್ದರು.
ಉತ್ತಮ ಸ್ಪಂದನೆ : ಜನಸ್ಪಂದನಕ್ಕೆ ಉತ್ತಮ ಸ್ಪಂದನೆ ದೊರತಿದೆ. ಕಳೆದ ಬಾರಿ ಸಭೆಯಲ್ಲಿ 51 ಅರ್ಜಿಯಲ್ಲಿ 27 ಅರ್ಜಿ ವಿಲೇವಾರಿ ಮಾಡಲಾಗಿದ್ದು, ಕೆಲ ಅರ್ಜಿಗಳಿಗೆ ಹಿಂಬರಹ ನೀಡಲಾಗಿದೆ. ಉಳಿಕೆ ಅರ್ಜಿಯನ್ನು ಹಂತ ಹಂತವಾಗಿ ಬಗೆಹರಿಸಲಾಗುತ್ತಿದೆ. ಇಂದಿನ ಸಭೆಯಲ್ಲಿ 53 ಅರ್ಜಿ ನೀಡಿದ್ದು, ಕೆಲವೊಂದನ್ನು ಸ್ಥಳದಲ್ಲೇ ಬಗೆಹರಿಸಲಾಗಿದೆ. ಉಳಿದ ಅರ್ಜಿಗಳ ಕುರಿತಂತೆ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಮಲ್ಲೇಶ್ಬೀರಪ್ಪ ಪೂಜಾರ್ ತಿಳಿಸಿದರು.
ಅರ್ಹರ ಕಾರ್ಡ್ ರದ್ದು ಮಾಡಲ್ಲ : ಇತ್ತೀಚೆಗೆ ಸರ್ಕಾರ ಐಟಿ ಪಾವತಿ ದಾರರ ಬಿಪಿಎಲ್ ಕಾರ್ಡ್ ರದ್ದು ಮಾಡಿ ನೋಟಿಸ್ ಜಾರಿಗೊಳಿಸಿದೆ. ಕ್ಷೇತ್ರದಲ್ಲಿ ಬಡವರ ಹಾಗೂ ಅರ್ಹ ಬಿಪಿಎಲ್ ಕಾರ್ಡ್ ರದ್ದು ಮಾಡಲು ಬಿಡುವುದಿಲ್ಲ. ಅರ್ಹರು ಬಿಪಿಎಲ್ ಕಾರ್ಡ್ ವಂಚಿತರಾಗದಂತೆ ಕ್ರಮವಹಿಸುವಂತೆ ತಹಸೀಲ್ದಾರ್ಗೆ ಸೂಚನೆ ನೀಡಲಾಗಿದೆ ಎಂದು ಎನ್.ಶ್ರೀನಿವಾಸ್ ತಿಳಿಸಿದರು.
ವೃಷಭಾವತಿ ಯೋಜನೆಗೆ ಪಿತೂರಿ : ವೃಷಭಾವತಿ ಯೋಜನೆ ಜಾರಿಗೊಳಿಸಿದ್ದು ಬಿಜೆಪಿ ಸರ್ಕಾರ, ಅಂದು ವಿರೋಧಿಸದಿರುವ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಇಂದು ವಿರೋಧ ಮಾಡುತ್ತಿರುವುದು ಹಾಸ್ಯಾಸ್ಪದ. ಈ ಹಿಂದಿನ ಸರ್ಕಾರ ಮಾಡಿದ ಯೋಜನೆಯನ್ನೇ ಮುಂದುವರಿಸಲಾಗುತ್ತಿದೆ. ಈಗಾಗಲೇ ಪೈಪ್ಲೈನ್ ಕಾಮಗಾರಿ ಪ್ರಗತಿಯಲ್ಲಿದೆ. ಕಾನೂನು ಮೊರೆ ಹೋಗಿ ತಡೆಯಾಜ್ಞೆ ತಂದು ಕಾಮಗಾರಿ ನಿಲ್ಲಿಸಲಿ. ಜನರಿಗೆ ತೊಂದರೆ ನೀಡುವ ಯೋಜನೆಯನ್ನು ಸರ್ಕಾರ ಎಂದಿಗೂ ಮಾಡುವುದಿಲ್ಲ. ಯೋಜನೆ ಬಗ್ಗೆ ವಿರೋಧ ಪಕ್ಷಗಳು ರಾಜಕೀಯ ಪಿತೂರಿ ನಡೆಸಿ ಕ್ಷೇತ್ರದ ಜನರಿಗೆ ತಪ್ಪು ಸಂದೇಶ ನೀಡುತ್ತಿವೆ ಎಂದು ಎನ್.ಶ್ರೀನಿವಾಸ್ ಹೇಳಿದರು.