ಗುಮ್ಮಟನಗರಿಯಲ್ಲಿ ಜನಪರ ಉತ್ಸವ ನಾಳೆ

WhatsApp Image 2022-09-23 at 4.27.09 PM
ವಿಜಯಪುರ ನಗರದಲ್ಲಿರುವ ವಾರ್ತಾ ಮತ್ತು ಪ್ರಚಾರ ಇಲಾಖೆ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಮಾತನಾಡಿದರು. ಗವಿಸಿದ್ಧಪ್ಪ ಹೊಸಮನಿ ಜತೆಗಿದ್ದರು
Published on

ವಿಜಯಪುರ : ನಗರದ ಆನಂದ ಮಹಲ್ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸೆ.24ರಂದು ಸಂಜೆ 6ಕ್ಕೆ ‘ಜನಪರ ಉತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ನಾಗರಾಜ ಹೇಳಿದರು.

ಕೊವೀಡ್ ಕಾರಣದಿಂದ ಕಳೆದ ಎರಡು ವರ್ಷ ಯಾವುದೇ ಕಾರ್ಯಕ್ರಮಗಳನ್ನು ಆಯೋಜಿಸಿರಲಿಲ್ಲ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ವಿಶೇಷ ಘಟಕ ಯೋಜನೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ವಾರ್ತಾ ಮತ್ತು ಪ್ರಚಾರ ಇಲಾಖೆ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಸಂಜೆ 4.30 ಕ್ಕೆ 9 ವಿವಿಧ ಕಲಾ ತಂಡಗಳ 98 ಜನ ಕಲಾವಿದರು ಮೆರವಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಗರದ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಗೊಂಡು, ಗಾಂಧಿ ಚೌಕ್‌ಮಾರ್ಗವಾಗಿ ಬಸವೇಶ್ವರ ವೃತ್ತ ಮೂಲಕ ಆನಂದ ಮಹಲ್ ಆವರಣಕ್ಕೆ ಕಲಾ ಮೇಳಗಳು ಆಗಮಿಸಲಿವೆ. ವಿವಿಧ ಜಿಲ್ಲೆಗಳಿಂದ 156 ಕಲಾವಿದರು ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. 8 ಕಲಾ ಪ್ರಕಾರಗಳ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ

ಜನಪರ ಉತ್ಸವದಲ್ಲಿ ಸಮೂಹ ನತ್ಯ, ಜಾನಪದ ಗೀತೆಗಳು, ಚೌಡಕಿ ಪದಗಳು, ಮೋಚಿಂಗ್ ವಾದನ, ಗೀಗೀ ಪದಗಳು, ಜಾನಪದ ನೃತ್ಯ, ಕೃಷ್ಣಾ-ರುಕ್ಮೀಣಿ, ಶ್ರೀಕೃಷ್ಣ ಪಾರಿಜಾತ, ಭಜನೆ ಹಾಡು, ಡೊಳ್ಳು ಕುಣಿತ, ಡೊಳ್ಳು ಹಾಡು ಸೇರಿದಂತೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

ಶಾಸಕ ಯತ್ನಾಳ ಅಧ್ಯಕ್ಷತೆ
ಕಾರ್ಯಕ್ರಮದಲ್ಲಿ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಧ್ಯಕ್ಷತೆ ವಹಿಸಲಿದ್ದು, ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಮುಖ್ಯ ಅಥಿತಿಗಳಾಗಿ ಅಗಮಿಸಲಿದ್ದಾರೆ. ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೋಡ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ, ಯಶವಂತರಾಯಗೌಡ ಪಾಟೀಲ, ಸೋಮನಗೌಡ ಪಾಟೀಲ, ದೇವಾನಂದ ಚವ್ಹಾಣ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಚ್.ಡಿ.ಆನಂದಕುಮಾರ, ಜಿಪಂ ಸಿಇಒ ರಾಹುಲ್ ಶಿಂಧೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದರು.

791 ಕಲಾವಿದರಿಗೆ ಪಿಂಚಣಿ
ಜಿಲ್ಲೆಯಲ್ಲಿ ಒಟ್ಟು 2600 ಜನ ಕಲಾವಿದರಿದ್ದು, ಅವರಲ್ಲಿ 791 ಜನ ಕಲಾವಿದರು ಸರ್ಕಾರದಿಂದ 2 ಸಾವಿರ ರೂ. ಮಾಸಾಶನ ಪಡೆದುಕೊಳ್ಳುತ್ತಿದ್ದಾರೆ. ಎಲ್ಲ ಕಲಾವಿದರು ಸೇವಾ ಸಿಂಧು ಅಡಿಯಲ್ಲಿ ಅರ್ಜಿ ಸಲ್ಲಿಸಿ ಕಲಾವಿದರ ಗುರುತಿನ ಚೀಟಿ ಪಡೆದುಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಹೊಸ ಕಲಾವಿದರು ಸಹಿತ ತಮ್ಮ ಕಲೆಯ ಬಗ್ಗೆ ಇರುವ ಪ್ರಮಾಣ ಪತ್ರಗಳನ್ನು ಸೇವಾ ಸಿಂಧು ಅಡಿಯಲ್ಲಿ ದಾಖಲಿಸಿ ಗುರುತಿನ ಚೀಟಿ ಪಡೆದುಕೊಳ್ಳಬಹುದಾಗಿದೆ ಎಂದರು.

ಹಲಸಂಗಿ ಗೆಳೆಯರ ಬಳಗಕ್ಕೆ ಹೊಸ ಟಚ್
ಹಲಸಂಗಿ ಗೆಳೆಯರ ಬಳಗಕ್ಕೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿದ್ದು, ಕೊವೀಡ್ ಕಾರಣದಿಂದ ಎರಡು ವರ್ಷಗಳ ಕಾಲ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರಲಿಲ್ಲ. ಮುಂದಿನ ತಿಂಗಳಿಂದ ಪ್ರತಿ ತಾಲೂಕಿನಲ್ಲಿ ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಪ್ರತಿಷ್ಠಾನಕ್ಕೆ ಹೊಸಟಚ್ ನೀಡುವ ಮೂಲಕ ಇನ್ನಷ್ಟು ಉತ್ತಮವಾದ ಕಾರ್ಯ ಚಟುವಟಿಕೆಗಳನ್ನು ಮಾಡಲಾಗುವುದು ಎಂದರು.

ಇನ್ನೂ ಕಂದಗಲ್ ಹನುಮಂತರಾಯ ರಂಗಮಂದಿರದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿ ಹಾಗೂ ಪುಸ್ತಕ ಮಾರಾಟ ಮಳಿಗೆ ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ರಾಣಿ ಚನ್ನಮ್ಮ ನಾಟ್ಯ ಮಂದಿರ ಅಭಿವೃದ್ಧಿಗೂ ಇಲಾಖೆ ಸಿದ್ಧ ಇದೆ ಎಂದು ಹೇಳಿದರು. ಈ ವೇಳೆ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಗವಿಸಿದ್ಧಪ್ಪ ಹೊಸಮನಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net