ರಂಗಾಯಣದಲ್ಲಿ ಜನಪದೋತ್ಸವಕ್ಕೆ ಚಾಲನೆ

19 - Copy
Published on

ಮೈಸೂರು: ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಮುನ್ನುಡಿಯಾಗಿ ‘ಬಹುರೂಪಿ ಜಾನಪದೋತ್ಸವ’ಕ್ಕೆ ಗುರುವಾರ ಸಂಜೆ ಚಾಲನೆ ದೊರೆಯಿತು. ಆ ಮೂಲಕ ರಂಗ ಮಂಚದ ಮೇಲೆ ‘ಬಹುರೂಪಿ ಬಹುರಂಗು’ ತೆರೆದುಕೊಂಡಿತು.

ರಂಗಾಯಣ ಆವರಣದ ವನರಂಗ ವೇದಿಕೆಯ ಸುತ್ತಲೂ ನೆರೆದಿದ್ದ ರಂಗಾಸಕ್ತರ ನಡುವೆ ವೇದಿಕೆಯ ಮೇಲೆ ನವಿಲಿನ ವೇಷ ಧರಿಸಿ ಬಂದ ಕಲಾವಿದನ ಗರಿಗಳಲ್ಲಿದ್ದ ‘ಭಾರತೀಯತೆ ವಿವಿಧ ಕಲೆಗಳಿಗೆ’ ಪುಷ್ಪಾರ್ಚನೆ ಮಾಡುವ ಮೂಲಕ ಜಾನಪದ ತಜ್ಞ ಡಾ.ಪಿ.ಕೆ.ರಾಜಶೇಖರ್ ಜನಪದೋತ್ಸವಕ್ಕೆ ಚಾಲನೆ ನೀಡಿದರು.

ಅದರೊಂದಿಗೆ ಜನಪದ ಕಾರ್ಯಕ್ರಮಗಳ ಕಲರವ ಗರಿಗೆದರಿತು. ಪ್ರೇಕ್ಷಕರಿಗೆ ಮಾಗಿಯ ಚಳಿಯಲ್ಲೂ ಬೆಚ್ಚನೆ ಅನುಭವ ನೀಡಿತು. ಖ್ಯಾತ ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ, ಉಪನಿರ್ದೇಶಕಿ ನಿರ್ಮಲಾ ಮಠಪತಿ, ಸಂಚಾಲಕ ಜಗದೀಶ್ ಮನವಾರ್ತೆ, ರಂಗಕರ್ಮಿ ಗೀತಾ ಮೋಟಂಡ್ಕ ಉಪಸ್ಥಿತರಿದ್ದರು.

ಡಾ.ಪಿ.ಕೆ.ರಾಜಶೇಖರ್ ಮಾತನಾಡಿ, ನಮ್ಮ ದೇಶದ ನೆಲಮೂಲ ಸಂಸ್ಕೃತಿ ಎಂದರೆ ಅದು ಜಾನಪದ. ಸಾವಿರಾರು ವರ್ಷಗಳಿಂದ ಬಳುವಳಿಯಾಗಿ ಬಂದಿರುವ ಈ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಜನಪದ ನಮ್ಮ ಗ್ರಾಮೀಣರ ಮನಸ್ಸಿನಲ್ಲಿ ಭದ್ರವಾಗಿ ನೆಲೆ ನಿಂತಿದೆ. ಅದನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು. ಅನಕ್ಷರಸ್ಥರಾದರೂ ಅದ್ಭುತ ಸಾಹಿತ್ಯವನ್ನು ಜನಪದರು ನೆನಪಿಟ್ಟುಕೊಂಡಿದ್ದಾರೆ. ಹಾಗಾಗಿ ಆಧುನಿಕ ಭರಾಟೆಯಲ್ಲೂ ನಾವೀಗ ಮೂಲದಾಟಿಯಲ್ಲೇ ಜನಪದವನ್ನು ಸಂರಕ್ಷಿಸಬೇಕಿದೆ ಎಂದರು.

ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿ, ಜಾನಪದ ಹಾಗೂ ಸಾಂಪ್ರದಾಯಿಕ ಕಲೆಗಳು ನಮ್ಮ ಹೆಮ್ಮೆ. ಆದರೆ, ಪಾಶ್ಚಿಮಾತ್ಯ ಸಂಸ್ಕೃತಿ ನಮ್ಮ ಕಲೆ ಹಾಗೂ ಸಂಪ್ರದಾಯದ ಮೇಲೆ ಸವಾರಿ ಮಾಡುತ್ತಿದೆ ಎಂದು ವಿಷಾದವ್ಯಕ್ತಪಡಿಸಿದರು.

ವೇದಿಕೆ ಕಾರ್ಯಕ್ರಮದ ಬಳಿಕ ಕೆರೆಮನೆ ಶಿವಾನಂದ ಹೆಗಡೆ ಅವರ ತಂಡದಿಂದ ಯಕ್ಷಗಾನ ಪಂಚವಟಿ ಪ್ರೇಕ್ಷಕರನ್ನು ಆಕರ್ಷಿಸಿತು. ನಂಜನಗೂಡಿನ ಮಹದೇವ್ ಮತ್ತು ತಂಡದ ಕಂಸಾಳೆಗೆ ಪ್ರೇಕ್ಷಕರು ಮನಸೋತರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net