

ಕೆಜಿಎಫ್: ಜನೌಷಧ ಮಳಿಗೆಗಳಲ್ಲಿ 700ಕ್ಕೂ ಅಧಿಕ ಔಷಧಗಳು ಲಭ್ಯವಿದ್ದು, ಖಾಸಗಿ ಮೆಡಿಕಲ್‌ಗಳಲ್ಲಿ ದೊರಕುವ ಔಷಧ ಇಲ್ಲಿಯು ದೊರೆಯಲಿದ್ದು, ಉತ್ತಮ ಗುಣಮಟ್ಟದ ಔಷಧ ಅತಿ ಕಡಿಮೆ ದರದಲ್ಲಿ ದೊರೆಯಲ್ಲಿದೆ. ಪ್ರತಿಯೊಬ್ಬರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕುಟುಂಬ ಮತ್ತು ಆರೋಗ್ಯ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಜನೌಷಧ ದಿನ್ ಕಾರ್ಯಕ್ರಮದಲ್ಲಿ ಮಾತನಾಡಿ, ಕೆಜಿಎ್ ಸಾರ್ವಜನಿಕ ಆಸ್ಪತ್ರೆ ಖಾಸಗಿ ಆಸ್ಪತ್ರೆಗಳಿಗಿಂತ ಕಡಿಮೆ ಇಲ್ಲ. ಸಿಬ್ಬಂದಿ ಸ್ವಚ್ಛತೆ ಕಾಪಾಡುವಲ್ಲಿ ಮುಂದಿದ್ದಾರೆ. ಇದು ಹೀಗೆ ಮುಂದುವರೆಯಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜನೌಷಧ ಕೇಂದ್ರ ಆರಂಭಿಸಿ 3 ವರ್ಷ ಪೂರ್ಣಗೊಂಡ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದನ್ನು ನೇರವಾಗಿ ಸಂಸದರು ಬೆಂಬಲಿಗರೊಂದಿಗೆ ವಿಕ್ಷೀಸಿದರು.
ಸಂಘಟಕರ ವಿರುದ್ಧ ಸಂಸದರ ಅಸಮಧಾನ: ಜನೌಷಧ ಕೇಂದ್ರ ಪ್ರಾರಂಭಿಸಿ 3 ವರ್ಷ ಪೂರ್ಣಗೊಂಡ ಹಿನ್ನೆಲೆ ಪ್ರಧಾನಿ ದೇಶವನ್ನು ಉದ್ದೇಶಿಸಿ ಮಾತನಾಡುವುದನ್ನು ವಿಕ್ಷೀಸಲು ಸರ್ಕಾರಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದ ಪರದೆ ಕೆಲಸ ಮಾಡದಿದ್ದರಿಂದ ಅಧಿಕಾರಿಗಳು ಹಾಗೂ ಬೆಂಬಲಿಗರ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು. ತಕ್ಷಣ ಎಚ್ಚೆತ್ತ ಸಂಘಟಕರು ಪರ‌್ಯಾಯವಾಗಿ ಬೇರೆ ಪರದೆ ಅಳವಡಿಸುವ ಮೂಲಕ ಕಾರ್ಯಕ್ರಮ ಮುಂದುವರೆಯುವಂತೆ ಮಾಡಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ದಿನಗೂಲಿ ಕಾರ್ಮಿಕರಿಗೆ 6 ತಿಂಗಳಿನಿಂದ ಸಂಬಳ ದೊರಯದೆ ಕುಟುಂಬ ಸಂಕಷ್ಟಕ್ಕೆ ಒಳಗಾಗಿದ್ದು, ಸರಿಯಾದ ಸಮಯಕ್ಕೆ ವೇತನ ನೀಡುವಂತೆ ಸೂಚಿಸಿ ಎಂದು ಸಿಬ್ಬಂದಿ ಮನವಿ ಮಾಡಿದರು. ಮನವಿ ಆಲಿಸಿದ ಸಂಸದರು ಡಿಎಸ್ ಕರೆದು ತಕ್ಷಣ ಸಮಸ್ಯೆ ಬಗೆಹರಿಸುವಂತೆ ಆದೇಶ ನೀಡಿದರು.
ಕೆಜಿಎಫ್ ವಿಧಾನಸಭೆ ಕ್ಷೇತ್ರದ ಬಿಜೆಪಿ ಘಟಕದಲ್ಲಿ 4 ಬಣ ಅಧಿಕಾರಕ್ಕಾಗಿ ಆಂತರಿಕವಾಗಿ ಜಂಗಿ ಕುಸ್ತಿ ನಡೆಸುತ್ತಿದ್ದು, ಇದೀಗ ಸಂಸದ ಮುನಿಸ್ವಾಮಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಮಾಜಿ ಶಾಸಕ ವೈ.ಸಂಪಂಗಿ ಗೈರಾಗುವ ಮೂಲಕ ಇಬ್ಬರ ಮುಸಿಕಿನ ಗುದ್ದಾಟ ಬಹಿರಂಗಗೊಂಡಿದೆ.
ನಗರ ಬಿಜೆಪಿ ಅಧ್ಯಕ್ಷ ಕಮಲ್‌ನಾಥನ್, ನಗರಸಭೆ ಸದಸ್ಯೆ ವೇಣಿಪಾಂಡಿಯನ್, ನಗರಸಭೆ ಮಾಜಿ ಮಾಜಿ ಉಪಾಧ್ಯಕ್ಷೆ ಸಂಗೀತಾ ಶ್ರೀನಿವಾಸ್, ಮಾಜಿ ಸದಸ್ಯೆ ಉಮಾಮಾಲತೇಶ್, ಕೋಲಾರ ಜಿಲ್ಲಾ ಉಪಾಧ್ಯಕ್ಷ ಸುರೇಶ್‌ನಾರಾಯಣಕುಟ್ಟಿ, ನಗರ ಬಿಜೆಪಿ ಮಾಜಿ ಅಧ್ಯಕ್ಷ ರವಿಕುಮಾರ, ಡಿಎಸ್ ಡಾ.ವಿಜಿಕುಮಾರ, ಡಾ.ಶಿವಕುಮಾರ ಮತ್ತಿತರರಿದ್ದರು.
ಟಿಕೇಟ್ ಯಾರ ಜೋಬಿನಲಿಲ್ಲ: ಸಂಸದ ಮುನಿಸ್ವಾಮಿ ಭೇಟಿ ನೀಡಿದ್ದ ಕಾರ್ಯಕ್ರಮಕ್ಕೆ ಗೈರಾಜರಾಗಿದ್ದ ಮಾಜಿ ಶಾಸಕ ವೈ.ಸಂಪಂಗಿ ಸಂಸದರು ಕಾರ್ಯಕ್ರಮದಿಂದ ತೆರಳಿದ ನಂತರ ಜನೌಷಧ ಕೇಂದ್ರಕ್ಕೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಅಧಿಕಾರ ಕೇವಲ ವರಿಷ್ಠರಿಗೆ ಇರಲಿದ್ದು, ಟಿಕೆಟ್ ಸಂಸದರ ಜೋಬಿನಲ್ಲೂ ಇರುವುದಿಲ್ಲ ಅಥವಾ ಮನೆಯಲ್ಲೂ ಇರುವುದಿಲ್ಲ ಪಕ್ಷದಲ್ಲಿ ನನ್ನನ್ನು ಯಾರು ಕಡೆಗಣಿಸುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಜಿಪಂ ಸದಸ್ಯೆ ಅಶ್ವಿನಿ, ನಗರಸಭೆ ಸದಸ್ಯೆ ರಾಮುಲ್ಲಮ್ಮಗಂಟ್ಲಪ್ಪ ಮತ್ತಿತರರಿದ್ದರು.