

ಮೈಸೂರು: ಸಮುದಾಯ ಕರ್ನಾಟಕದ ಗೌರವ ಅಧ್ಯಕ್ಷರಾಗಿ ರಂಗಾಯಣದ ಮಾಜಿ ನಿರ್ದೇಶಕ ಎಚ್.ಜನಾರ್ಧನ್(ಜನ್ನಿ) ಆಯ್ಕೆಯಾಗಿದ್ದಾರೆ ಎಂದು ಸಂಘಟನೆ ಅಧ್ಯಕ್ಷ ಜೆ.ಸಿ.ಶಶಿಧರ್ ತಿಳಿಸಿದ್ದಾರೆ.
1984 ರಲ್ಲಿ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ನಿರ್ದೇಶನದ ಪದವಿ ಪಡೆದು, ರಂಗಾಯಣ ಮೈಸೂರು ಸಂಸ್ಥೆಯ ನಿರ್ದೇಶಕರಾಗಿ ಜನ್ನಿ ಕಾರ್ಯನಿರ್ವಹಿಸಿದ್ದರು. ಇವರು ಸಮುದಾಯದ ಜಾಥಾ, ಬೀದಿ ನಾಟಕಗಳಲ್ಲಿ ಪ್ರಮುಖ ನಟನಾಗಿ, ಗಾಯಕನಾಗಿ ಜನಮನ ಗೆದ್ದ ಕಲಾವಿದರಾಗಿದ್ದಾರೆ. ಕರ್ನಾಟಕದ ಸಾಂಸ್ಕೃತಿಕ ಚಳವಳಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಸಾಕ್ಷರತಾ ಆಂದೋಲನಕ್ಕೆ ಸಾಂಸ್ಕೃತಿಕ ಆಯಾಮ ಕೊಟ್ಟವರಲ್ಲಿ ಜನ್ನಿ ಪ್ರಮುಖರು ಎಂದು ಶಶಿಧರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.