ಜನ್ಮಜಯಂತಿ ಮಹಾಮಹೋತ್ಸವದಲ್ಲಿ ಪಾಲ್ಗೊಂಡ ಸಹಸ್ರಾರು ಭಕ್ತರು

VARAR NW
Published on

ಹುಬ್ಬಳ್ಳಿ : ರಾಷ್ಟ್ರಸಂತ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ 50ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಅವರ ಭಕ್ತರು ಇಲ್ಲಿನ ವರೂರ ನವಗ್ರಹ ತೀರ್ಥಕ್ಷೇತ್ರದಲ್ಲಿ ಮೂರು ದಿನಗಳವರೆಗೆ ಆಯೋಜಿಸಿದ್ದ ಸ್ವರ್ಣ ಜನ್ಮ ಜಯಂತಿ ಮಹಾಮಹೋತ್ಸವ ಬುಧವಾರ ಸಂಪನ್ನಗೊಂಡಿತು.

ಮೂರು ದಿನಗಳ ಮಹಾ ಮಹೋತ್ಸವದಲ್ಲಿ ಧಾರವಾಡ ಅಷ್ಟೇ ಅಲ್ಲದೇ, ಬೆಳಗಾವಿ, ಗದಗ, ಹಾವೇರಿ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳ ಹಾಗೂ ಹೊರ ರಾಜ್ಯಗಳ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ಮೂರು ದಿನಗಳಂದು ಹೆಲಿಕ್ಯಾಪ್ಟರ್ ಮೂಲಕ ನವಗ್ರಹಗಳಿಗೆ ಭಕ್ತರು ಪುಷ್ಪವೃಷ್ಟಿ ಮಾಡಿದರು. ಮೃತ್ಯುಂಜಯ ಮಹಾಯಾಗ ಸೇರಿದಂತೆ ಇತರ ಹೋಮ, ಹವನಗಳು ನೆರವೇರಿದವು. ಶ್ರೀ ಗುಣಧರನಂದಿ ಮಹಾರಾಜರ ಮಾರ್ಗದರ್ಶನದಲ್ಲಿ ಸಾವಿರಾರು ಶ್ರಾವಕಿಯರು ಪೂಜಾ ವಿಧಾನಗಳನ್ನು ನೆರವೇರಿಸಿದರು.

ಬುಧವಾರದಂದು 1008 ಶ್ರಾವಕಿಯರು ಕುಂಭದ ನೀರಿನಿಂದ ಭಗವಾನ ಪಾರ್ಶ್ವನಾಥ ಮೂರ್ತಿಗೆ ಅಭಿಷೇಕ ಮಾಡಿದರು.

ಇದೇ ಸಂದರ್ಭದಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಸಮಾರಂಭವನ್ನು ರಾಜ್ಯಪಾಲ ಥಾವರಚಂದ ಗೆಹಲೋತ್ ಉದ್ಘಾಟಿಸಿದರು.

ಉದ್ಘಾಟನಾ ಭಾಷಣವನ್ನು ಕನ್ನಡದಲ್ಲಿಯೇ ಆರಂಭಿಸಿದ ರಾಜ್ಯಪಾಲರು, ‘ಎಲ್ಲರಿಗೂ ನಮಸ್ಕಾರ. ಜೈ ಜಿನೇಂದ್ರ.. ನಾನು ನಿಮ್ಮೆಲ್ಲರನ್ನೂ ಸ್ವಾಗತಿಸುತ್ತೇನೆ’ ಎಂದರು.

ಅತಿಥಿಯಾಗಿದ್ದ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, 15 ವರ್ಷಗಳಲ್ಲಿ ಸರ್ಕಾರಕ್ಕೆ ಮಾಡಲಾಗದ ಕಾರ್ಯವನ್ನು ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರು ಮಾಡಿದ್ದಾರೆ. ಇಂತಹ ಸ್ವಾಮೀಜಿಗಳಿಂದ ನಾಡು ಸಮೃದ್ಧಿ ಆಗುತ್ತದೆ ಎಂದರು.

ಉಪ ಸಭಾಪತಿ ರುದ್ರಪ್ಪ ಲಮಾಣಿ ಮಾತನಾಡಿ, ಜೈನ ಧರ್ಮದ ಸಿದ್ಧಾಂತಗಳು ಇಡೀ ಮನುಕುಲಕ್ಕೆ ಮಾದರಿಯಾಗಿವೆ ಎಂದು ಹೇಳಿದರು.

ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ದೇಶಿ ಸಂಸ್ಕೃತಿಯ ಪಾಠ ಮಾಡುವಂತೆ ಸಲಹೆ ನೀಡಿದ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಗುಣಧರನಂದಿ ಮಹಾರಾಜರ ಜೀವನ ಎಲ್ಲರಿಗೂ ಆದರ್ಶವಾಗಲಿ ಎಂದರು.

ಶಾಸಕ ಎಂ.ಆರ್. ಪಾಟೀಲ, ಮಾಜಿ ಶಾಸಕ ವೀರಕುಮಾರ ಪಾಟೀಳ, ನಟ ಶರಣ ಮಾತನಾಡಿದರು. ಇದೇ ಸಂದರ್ಭದಲ್ಲಿ ಆಚಾರ್ಯ ಶ್ರೀ ಗುಣಧರನಂದಿ ಮಹಾರಾಜರ ಕುರಿತ ಪುಸ್ತಕವನ್ನು ರಾಜ್ಯಪಾಲರು ಲೋಕಾರ್ಪಣೆಗೊಳಿಸಿದರು. ಹೊಂಬುಜದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಿದರು.

ವಿವಿಧ ಊರುಗಳ 50 ಜನ ಸಾಧಕರಿಗೆ ನವಗ್ರಹ ಪುರಸ್ಕಾರ ನೀಡಿ, ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net