

ಕುಶಾಲನಗರ: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕಳುವಾರ ಗ್ರಾಮದಲ್ಲಿರುವ ಶ್ರೀ ಬನಶಂಕರಿ ದೇವಾಂಗ ಸಂಘದಿಂದ ನೂಲು ಹುಣ್ಣಿಮೆಯ ಅಂಗವಾಗಿ ಜನಿವಾರದ ಹಬ್ಬ ಆಚರಣೆಯು ವಿವಿಧ ಪೂಜಾ ಕೈಂಕರ್ಯದೊಂದಿಗೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ಇದರ ಅಂಗವಾಗಿ ಅಳವಾರದಮ್ಮನ ದೇವಸ್ಥಾನದಿಂದ ಮಹಿಳೆಯರು ಮತ್ತು ಪುರುಷರು ಸೇರಿ ಪಂಚ ಕಳಸದೊಂದಿಗೆ ಮಂಗಳವಾದ್ಯ ಸಮೇತವಾಗಿ ಹುಣ್ಣಿಮೆಯ ಪೂಜಾ ಕಾರ್ಯಕ್ರಮ ಆಯೋಜಿತ ಸ್ಧಳಕ್ಕೆ ಬಂದು, ಸ್ಧಳದಲ್ಲಿ ಪೂಜೆ ನೆರವೇರಿಸಿದರು. ನಂತರ ಸಂಘದ ಎಲ್ಲ ಸದಸ್ಯರು ರಕ್ಷೆ ಕಟ್ಟಿಸಿಕೊಳ್ಳುವುದರೊಂದಿಗೆ ಜನಿವಾರ ಧರಿಸಿಕೊಂಡರು.
ಬನಶಂಕರಿ ದೇವಾಂಗ ಸಂಘದ ಅಧ್ಯಕ್ಷ ಡಿ.ಆರ್.ಪ್ರೇಮ್ ಕುಮಾರ, ತೊರೆನೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಶೋಭಾ ಪ್ರಕಾಶ್, ಸಹಕಾರ ಸಂಘದ ಉಪಾಧ್ಯಕ್ಷೆ ಗೌರಮಣಿ, ಸದಸ್ಯರಾದ ಮಹದೇವ, ಜಿಲ್ಲಾ ನೇಕಾರ ಸಮುದಾಯ ಒಕ್ಕೂಟದ ಅಧ್ಯಕ್ಷ ಟಿ.ಕೆ.ಪಾಂಡುರಂಗ ಸೇರಿದಂತೆ ಸಂಘದ ನಿರ್ದೇಶಕರು ಹಾಗೂ ನೂರಾರು ಕುಲಬಾಂಧವರು, ಭಾಗವಹಿಸಿದರು. ನಂತರ ಸಹ ಭೋಜನ ನೆರವೇರಿತು.