ಹುಬ್ಬಳ್ಳಿ: ತಾಲೂಕಿನ ಉಣಕಲ್ಲ ಗ್ರಾಮದ ಸದ್ಗುರು ಸಿದ್ದೇಶ್ವರ ಸ್ವಾಮೀಜಿ ಯುಗಾದಿ ಜಾತ್ರಾ ಮಹೋತ್ಸವ ನಿಮಿತ್ತ ಹೊಸಮಠ ಟ್ರಸ್ಟ್ ಕಮಿಟಿ ಆಶ್ರಯದಲ್ಲಿ ಬಯಲು ಜಂಗೀ ಕಾಟಾ ನಿಕಾಲಿ ಕುಸ್ತಿ ಸ್ಪರ್ಧೆಯನ್ನು ಮಾ. 31ರಿಂದ ನಾಲ್ಕು ದಿನಗಳವರೆಗೆ ಆಯೋಜಿಸಲಾಗಿದೆ.
ಉಣಕಲ್ಲ ಶ್ರೀ ಸಿದ್ದೇಶ್ವರ ದೇವಸ್ಥಾನ ಹಿಂಬದಿಯ ಹತ್ತಿ ಜಿನ್ ಹತ್ತಿರದ ಮೈದಾನದಲ್ಲಿ ಕುಸ್ತಿ ನಡೆಯಲಿವೆ. ಮಾ. 31ರಂದು ಸಂಜೆ 4ಕ್ಕೆ ಕುಸ್ತಿ ಸ್ಪರ್ಧೆಗಳನ್ನು ವಾಲ್ಮಿ ಮಾಜಿ ಅಧ್ಯಕ್ಷ ಚನ್ನು ಪಾಟೀಲ ಉದ್ಘಾಟಿಸುವರು. ಕಮಿಟಿ ಅಧ್ಯಕ್ಷ ರಾಜಣ್ಣ ಕೊರವಿ ಅಧ್ಯಕ್ಷತೆ ವಹಿಸುವರು.
ಏಪ್ರಿಲ್ 3ರಂದು ಫೈನಲ್ ಕುಸ್ತಿ ನಡೆಯಲಿದ್ದು, ಕೊಲ್ಲಾಪುರ, ಸಾಂಗ್ಲಿ, ಬೆಳಗಾವಿ, ಧಾರವಾಡ, ಶಿಕಾರಿಪುರ, ರಾಣೆಬೆನ್ನೂರ ಇತರೆಡೆಯಿಂದ ಹೆಸರಾಂತ ಪೈಲ್ವಾನರು ಆಗಮಿಸಲಿದ್ದಾರೆ.
ವಿಜೇತರಿಗೆ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.