

ಚನ್ನಪಟ್ಟಣ: ಹಲವು ವರ್ಷಗಳಿಂದ ವಹಿವಾಟು ನಡೆಯದ ಖಾತೆಯೊಂದಕ್ಕೆ ಏಕಾಏಕಿ 30 ಕೋಟಿ ರೂ. ಜಮೆಯಾಗಿದ್ದು, ಖಾತೆದಾರನ್ನು ಕಕ್ಕಾಬಿಕ್ಕಿಯಾಗಿಸಿದ್ದು, ಖಾತೆಯಲ್ಲಿ ಅಕ್ರಮ ವಹಿವಾಟು ನಡೆದಿರುವ ಶಂಕೆ ವ್ಯಕ್ತವಾಗಿದೆ.
ನಗರದ ಬೀಡಿ ಕಾರ್ವಿುಕರ ಕಾಲನಿ ನಿವಾಸಿ ರೆಹಾನಾಬಾನು ಕೆಲ ವರ್ಷದ ಹಿಂದೆ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಜನ್ಧನ್ ಖಾತೆ ತೆರೆದಿದ್ದರು. 2019ರ ಡಿಸೆಂಬರ್ 2ರ ಸಂಜೆ ಅವರ ಮನೆಗೆ ಬಂದ ಬ್ಯಾಂಕ್ ಸಿಬ್ಬಂದಿಯೊಬ್ಬರು ನಿಮ್ಮ ಖಾತೆಗೆ ಹಣ ಬಂದಿದೆ. ಆಧಾರ್ ಕಾರ್ಡ್ ತೆಗೆದುಕೊಂಡು ಬ್ಯಾಂಕಿಗೆ ಬನ್ನಿ ಎಂದಿದ್ದರು. ಆಶ್ಚರ್ಯಗೊಂಡ ಅವರು ಪತಿಯೊಂದಿಗೆ ಬ್ಯಾಂಕಿಗೆ ಹೋದಾಗ ವ್ಯವಸ್ಥಾಪಕರು ಫಾರಂ ಒಂದಕ್ಕೆ ಸಹಿ ಮಾಡಿಸಿಕೊಂಡು ಕಳುಹಿಸಿದ್ದಾರೆ. ಅನುಮಾನಗೊಂಡ ದಂಪತಿ ಡಿ.5ರಂದು ಬ್ಯಾಂಕ್ ವ್ಯವಸ್ಥಾಪಕರಿಗೆ ಸೂಕ್ತ ದಾಖಲೆ ನೀಡುವಂತೆ ತಿಳಿಸಿದರಾದರೂ ಅವರಿಂದ ಮಾಹಿತಿ ಬಂದಿಲ್ಲ. ಅಂದು ಸಂಜೆ ಬ್ಯಾಲೆನ್ಸ್ ಪರಿಶೀಲಿಸಿದಾಗ 29,99,74,084 ರೂ. ಇರುವುದು ತಿಳಿದು ಬಂದಿದೆ. ಬ್ಯಾಂಕಿಗೆ ಅಲೆದಾಡಿದ ರೆಹಾನಾಬಾನು ಮತ್ತು ಪತಿ ಜ.9ರಂದು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ಖಾತೆಯಲ್ಲಿ ವಹಿವಾಟು ನಡೆಸದಂತೆ ನಿರ್ಬಂಧ ಹೇರಲಾಗಿದೆ.
ಅವ್ಯವಹಾರದ ಶಂಕೆ: ಖಾತೆಯಲ್ಲಿ ಏಕಾಏಕಿ ದೊಡ್ಡಮೊತ್ತದ ವಹಿವಾಟು ನಡೆದಿರುವುದು ಅನುಮಾನ ಮೂಡಿಸಿದೆ. ಒಂದೇ ಬಾರಿ ದೊಡ್ಡ ಮೊತ್ತದ ವಹಿವಾಟು ನಡೆದಿದ್ದರೆ ನಮ್ಮ ಗಮನಕ್ಕೆ ಬರುತ್ತಿತ್ತು. ಈ ಖಾತೆಯಲ್ಲಿ 30 ಕೋಟಿ ರೂ. ವಹಿವಾಟು ನಡೆದಿರುವುದು ಸುಳ್ಳು. 30 ಲಕ್ಷ ರೂ.ನಡೆದಿದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದು, ತನಿಖೆ ನಡೆಯುತ್ತಿರುವ ಕಾರಣ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.