

ನಾಗಮಂಗಲ: ಮಹಿಳೆಯರ ಸಬಲೀಕರಣ ಹಾಗೂ ಸಮ ಸಮಾನತೆಗೆ ರಾಜ್ಯ ಸರ್ಕಾರವು ಹೊಸ ಯೋಜನೆಗಳ ಅನುಷ್ಠಾನಗೊಳಿಸುತ್ತಿದೆ ಎಂದು ರೈತ ಉತ್ಪಾದಕರ ಕಂಪನಿಯ ನಿರ್ದೇಶಕ ಎನ್.ಜೆ.ರಾಜೇಶ್ ಹೇಳಿದರು.
ತಾಲೂಕಿನ ದೇವಲಾಪುರದಲ್ಲಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯಿಂದ ಆಯೋಜಿಸಿದ್ದ ನಾಗಮಂಗಲ ತಾಲೂಕು ಮಟ್ಟದ 4ನೇ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಹಿಳೆಯು ಆರ್ಥಿಕ ಅಭಿವೃದ್ಧಿಯ ಮುಖಾಂತರ ಸಬಲೀಕರಣದ ಹೆಜ್ಜೆಗೆ ಸರ್ಕಾರವು ಮುಂದಾಗಿದ್ದು, ಮಹಿಳಾ ಸ್ವ ಸಹಾಯ ಶಕ್ತಿಯ ಸಂಘಟನಾತ್ಮಕವಾಗಿ ಬೆಳೆಸಲು ಸಹಕಾರ ನೀಡುತ್ತಿದೆ. ಜನವಾದಿ ಮಹಿಳಾ ಸಂಘಟನೆ ಹೋರಾಟದ ಹಾದಿ ಹಾಗೂ ತನ್ನದೇ ಆದ ಶಕ್ತಿಯಲ್ಲಿ ರಾಜ್ಯದಲ್ಲಿ ಮುನ್ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಂಘಟನೆ ಜಿಲ್ಲಾಧ್ಯಕ್ಷೆ ಡಿ.ಕೆ.ಲತಾ ಮಾತನಾಡಿ, ಮಹಿಳೆಯರು ಕೇವಲ ಕುಟುಂಬಕ್ಕಷ್ಟೇ ಅಲ್ಲದೇ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲೂ ಮಹಿಳೆಯರ ಪ್ರತಿಭೆ ತಕ್ಕಂತೆ ಹೆಚ್ಚಿನ ಅವಕಾಶ ಕಲ್ಪಿಸಬೇಕು. ಸಮಾಜದಲ್ಲಿನ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ದಬ್ಬಾಳಿಕೆ ನಿಲ್ಲಿಸುವ ವಿರುದ್ಧ ಪ್ರತಿಭಟನೆ ಮಾಡಲಾಗುತ್ತಿದೆ. ಪ್ರತಿಯೊಬ್ಬರಲ್ಲಿಯೂ ಪ್ರತಿಭಟನೆಯ ಕಿಚ್ಚು ಬೆಳೆಯಬೇಕು. ನಮ್ಮಗಳ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ಜ್ವಲಂತ ಸಮಸ್ಯೆಗಳನ್ನು ನ್ಯಾಯಯುತವಾಗಿ ಹೋರಾಟ ಮಾಡುವ ಮುಖಾಂತರ ಗ್ರಾಮೀಣ ಭಾಗದಲ್ಲಿಯೂ ಸಂಘಟನೆ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಹೆಚ್ಚು ಶ್ರಮವಹಿಸಬೇಕು ಎಂದದರು.
ಜಿಲ್ಲಾ ಮುಖಂಡರಾದ ಸುನೀತಾ ಮಾತನಾಡಿ, ಮಹಿಳೆಯರ ಹಕ್ಕು ಬಾಧ್ಯತೆಗಳ ನಿಯಮಾನುಸಾರ ಬೇಡಿಕೆಯನ್ನು ಈಡೇರಿಸಬೇಕು. ನರೇಗಾ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಬೇಕು. ದಿನಕ್ಕೆ 600 ರೂಪಾಯಿ ಕೂಲಿ ನಿಗದಿ ಮಾಡಿ 200 ದಿನದ ಕಾಲಾವಕಾಶ ನೀಡಬೇಕು. ಮಹಿಳೆಯರ ದೌರ್ಜನ್ಯ ತಡೆಗಟ್ಟಬೇಕೆಂಬುದು ಆಗ್ರಹಿಸಿದರು.
ಸಮಾರಂಭಕ್ಕೆ ಮುನ್ನ ಸಮ್ಮೇಳನದ ಧ್ವಜಾರೋಹಣವನ್ನು ನಾಗಮಂಗಲ ತಾಲೂಕು ಅಧ್ಯಕ್ಷೆ ಪ್ರೇಮಮ್ಮ ನೆರವೇರಿಸಿದರು. ಗ್ರಾಪಂ ಸದಸ್ಯ ದಿವಾಕರ್, ರೈತ ಉತ್ಪಾದಕರ ಕಂಪನಿ ನಿರ್ದೇಶಕ ಬಾಲು ಇತರರಿದ್ದರು.
ನೂತನ ಸಮಿತಿ ರಚನೆ: ತಾಲೂಕು ಅಧ್ಯಕ್ಷೆ ಪ್ರೇಮಮ್ಮ, ಕಾರ್ಯದರ್ಶಿ ವರಲಕ್ಷ್ಮೀ, ಖಜಾಂಚಿ ಮಂಜುಳಾ, ಉಪಾಧ್ಯಕ್ಷೆಯಾಗಿ ರುದ್ರಮ್ಮ ಮತ್ತು ಗೌರಮ್ಮ, ಸಹ ಕಾರ್ಯದರ್ಶಿ ಸವಿತಾ ವೆಂಕಟಲಕ್ಷ್ಮೀ ಸೇರಿದಂತೆ 12 ಜನ ಒಳಗೊಂಡ ನೂತನ ಸಮಿತಿ ಆಯ್ಕೆ ಮಾಡಲಾಯಿತು.