ನರೇಗಾ ಕೂಲಿ ಬಿಡುಗಡೆಗೆ ಒತ್ತಾಯ: ಜನವಾದಿ ಮಹಿಳಾ ಸಂಘಟನೆಯಿಂದ ಪ್ರತಿಭಟನೆ

Janavadi Mahila Sanga Protest mandya
Published on

ಮಂಡ್ಯ: ನರೇಗಾ ಕೂಲಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿ ಎದುರು ಬುಧವಾರ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಮಂಡ್ಯ ತಾಲೂಕು ಸಮಿತಿಯಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.

ಇಂಡುವಾಳು, ಸಂತೆಕಸಲಗೆರೆ, ಕನ್ನಲಿ, ಬೇವಿನಹಳ್ಳಿ ಹಾಗೂ ಹಳೇಬೂದನೂರು ಗ್ರಾಪಂ ಎದುರು ಪ್ರತಿಭಟಿಸಿ ಪಿಡಿಒಗಳ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ರವಾನಿಸಲಾಯಿತು. ನರೇಗಾ ಕೂಲಿ ಕಾರ್ಮಿಕರ ಹಾಜರಾತಿಯನ್ನು ಎನ್‌ಎಂಎಂಎಸ್ ಆ್ಯಪ್‌ನಲ್ಲಿ ಕಡ್ಡಾಯಗೊಳಿಸಲಾಗಿದೆ. ಈ ಮೂಲಕ ಕೂಲಿಕಾರರು ಕೆಲಸಕ್ಕೆ ಬಾರದಂತೆ ತಡೆಯಲು ಹುನ್ನಾರ ನಡೆಸಲಾಗಿದೆ. ಕೆಲಸ ಮಾಡುವ ಸ್ಥಳದಲ್ಲಿ ನೆಟ್ವರ್ಕ್ ಸಂಪರ್ಕ ಇದ್ದರೆ ಹಾಜರಾತಿ ಹಾಕಬಹುದು. ಇಲ್ಲದಿದ್ದರೆ ದಿನಗಟ್ಟಲೇ ಕಾಯಬೇಕಿದೆ. ಪರಿಣಾಮ ಕೆಲಸದಿಂದಲೇ ವಿಮುಖರಾಗುತ್ತಿದ್ದಾರೆಂದು ಆರೋಪಿಸಿದರು.

ರಾಜ್ಯದಲ್ಲಿ ಬರಗಾಲ ಎದುರಾಗಿರುವುದರಿಂದ ಜನರು ಸಂಕಷ್ಟದಲ್ಲಿದ್ದಾರೆ. ಮಳೆ, ಬೆಳೆ ಇಲ್ಲದೆ ದುಡಿಯುವ ಕೈಗಳಿಗೆ ಕೆಲಸವಿಲ್ಲದಂತಾಗಿದೆ. ಈ ನಡುವೆ ಮಾಡಿರುವ ಕೂಲಿಗೆ ಹಣ ಬಿಡುಗಡೆಯಾಗಿಲ್ಲ. ಆದ್ದರಿಂದ ಕೂಡಲೇ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಸಂಘಟನೆಯ ತಾಲೂಕು ಅಧ್ಯಕ್ಷೆ ಸುನೀತಾ, ಕಾರ್ಯದರ್ಶಿ ರಾಣಿ, ಮಂಗಳಮ್ಮ, ಸವಿತಾ, ನಾಗರತ್ನ, ಮಹಾದೇವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net