ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ದೊರೆಯಲಿ

byr
ಜನೌಷಧ ದಿವಸ್- 2025ನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಎಸ್.ಎನ್.ಚನ್ನಬಸಪ್ಪ. ಎನ್.ಕೆ.ಜಗದೀಶ್, ಎಸ್.ದತ್ತಾತ್ರಿ, ಡಿ.ಮೋಹನ್ ರೆಡ್ಡಿ, ಮಾಲತೇಶ್ ಮುಂತಾದವರಿದ್ದರು.
Published on

ಶಿವಮೊಗ್ಗ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಡವರಿಗಾಗಿಯೇ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳಿಂದ ದೇಶದ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಶನಿವಾರ ಜನೌಷಧ ದಿವಸ್- 2025 ಉದ್ಘಾಟಿಸಿ ಮಾತನಾಡಿದ ಅವರು, ಜನೌಷಧ ಕೇಂದ್ರದಿಂದ ಇನ್ನೂ ಹೆಚ್ಚಿನ ಬಡವರಿಗೆ ಪ್ರಯೋಜನ ತಲುಪಬೇಕು ಎಂಬುದು ಪ್ರಧಾನಿಯವರ ಮಹಾದಾಸೆಯಾಗಿದೆ. ದೇಶದಲ್ಲಿ 15 ಸಾವಿರ ಜನೌಷಧ ಕೇಂದ್ರಗಳಿವೆ ಎಂದರು.

ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ತಿಂಗಳಿಗೆ ಸರಾಸರಿ 3 ಸಾವಿರ ರೂ. ವಿವಿಧ ಔಷಧಗಳಿಗೆ ವೆಚ್ಚವಾಗುತ್ತಿತ್ತು. ಆದರೆ ಜನೌಷಧ ಕೇಂದ್ರದಿಂದಾಗಿ ಆ ಖರ್ಚು ಒಂದು ಸಾವಿರ ರೂ.ಗೆ ಇಳಿಕೆಯಾಗಿದೆ. ಇದರಿಂದ ಪ್ರತಿ ಕುಟುಂಬಕ್ಕೆ 2 ಸಾವಿರ ರೂ. ಉಳಿತಾಯವಾಗುತ್ತಿದೆ ಎಂದು ತಿಳಿಸಿದರು.

ಜನೌಷಧ ಕೇಂದ್ರಗಳಲ್ಲಿ ದೊರೆಯುವ ಔಷಧಗಳಿಗೆ ಯಾವುದೇ ತೆರಿಗೆ ಇಲ್ಲ. ಕೇವಲ ಉತ್ಪಾದನಾ ವೆಚ್ಚಕ್ಕೆ ಮಾರಾಟವಾಗುತ್ತಿವೆ. ರಾಜ್ಯದಲ್ಲಿ ಇದನ್ನು ಇನ್ನೂ ಸರಳೀಕರಿಸಬೇಕಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ದೊರೆಯುವಂತಾಗಬೇಕು. ಆದರೆ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಕುಟುಂಬ ಕಲ್ಯಾಣ ಇಲಾಖಾ ಕಚೇರಿಗಳಲ್ಲಿ ಜನೌಷಧ ಮಾರಾಟ ಮಾಡಲು ಸಹಕರಿಸುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲೂ ಜನೌಷಧ ದೊರಕಿದರೆ ಬಡವರಿಗೆ ಇನ್ನಷ್ಟು ಅನುಕೂಲವಾಗುತ್ತದೆ ಎಂದರು.

ಬಿಜೆಪಿ ರಾಜ್ಯ ಪ್ರಕೋಷ್ಠಗಳ ಅಧ್ಯಕ್ಷ ಎಸ್.ದತ್ತಾತ್ರಿ, ಶಾಸಕ ಎಸ್.ಎನ್. ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರಾಧ್ಯಕ್ಷ ಡಿ.ಮೋಹನ್ ರೆಡ್ಡಿ, ಜನೌಷಧ ಅಧಿಕಾರಿ ವೀರೇಶ್ ಬಾಬು, ಪ್ರಮುಖರಾದ ರಾಮುನಾಯ್ಕ, ಮಲ್ಲೇಶ್, ಮಾಲತೇಶ್, ಕಿರಣ್ ಕುಮಾರ್, ಸುನೀಲ್ ಗಾಯಕ್ವಾಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net