ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಯಲ್ಲಿ ಔಷಧ ಪೂರೈಕೆ

udp-7-dho
Published on

ಉಡುಪಿ: ಬಡವರಿಗೆ, ಮಧ್ಯಮ ವರ್ಗದವರಿಗೆ ನಿರಂತರವಾಗಿ ಕಡಿಮೆ ಬೆಲೆಯಲ್ಲಿ ಔಷಧಿಗಳು ಲಭ್ಯವಾಗಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಜನೌಷಧಿ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಜನೌಷಧಿ ಭಾರತ ದೇಶದಲ್ಲಿ ಔಷಧ ಉತ್ಪಾದನೆ ಹಾಗೂ ವಿತರಣೆಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಹೇಳಿದರು.

ಮಂಗಳವಾರ ನಗರದ ಅಜ್ಜರಕಾಡು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಶ್ರೀಕೃಷ್ಣ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಔಷಧ ನಿಯಂತ್ರಣ ಇಲಾಖೆ ಉಡುಪಿ, ಜಿಲ್ಲಾ ಆಸ್ಪತ್ರೆ, ಪ್ರಧಾನ ಮಂತ್ರಿ ಭಾರತೀಯ ಜನ ಔಷಧಿ ಕೇಂದ್ರ ಅಜ್ಜರಕಾಡು ಹಾಗೂ ಜಯಂಟ್ಸ್ ಗ್ರೂಪ್ ಬ್ರಹ್ಮಾವರ ಸಹಯೋಗದೊಂದಿಗೆ ನಡೆದ ಜನ ಔಷಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಜನೌಷಧ ಕೇಂದ್ರಗಳಲ್ಲಿ ಶೇ. 50-60 ರಷ್ಟು ಕಡಿಮೆ ಬೆಲೆಯಲ್ಲಿ ಔಷಧಿಗಳು ಲಭ್ಯವಿದ್ದು, ಇದರಿಂದ ಜನಸಾಮಾನ್ಯರಿಗೆ ವೆಚ್ಚದ ಉಳಿತಾಯವಾಗಲಿದೆ. ಜಿಲ್ಲೆಯಲ್ಲಿ 49 ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಗಾಮೀಣ ಪ್ರದೇಶದಲ್ಲಿಯೂ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಇದು ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಸಾಧಿಸಿದ ಮೈಲಿಗಲ್ಲು. ಸಾರ್ವಜನಿಕರು ಪ್ರಯೋಜನ ಪಡೆಯಬೇಕು ಎಂದರು.

ಜಿಲ್ಲಾ ಸಹಾಯಕ ಔಷಧ ನಿಯಂತ್ರಕ ಶಂಕರ್ ನಾಯಕ್ ಮಾತನಾಡಿ, ಜನೌಷಧಿ ಯೋಜನೆಯ ಕುರಿತು ಜನರಿಗೆ ಅರಿವು ಮೂಡಿಸಿ, ಅದರ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ. ಔಷಧಗಳ ಬೆಲೆ ಕಡಿಮೆ ಇರುವ ಕಾರಣ ಜನರಿಗೆ ಔಷಧಿಯ ಗುಣಮಟ್ಟದ ಬಗ್ಗೆ ಗೊಂದಲವಿದೆ. ಈ ಬಗ್ಗೆ ಇಲಾಖೆ ವತಿಯಿಂದ ಔಷಧಗಳ ಗುಣಮಟ್ಟವನ್ನು ಆಗಿಂದಾಗ್ಗೆ ಪರೀಕ್ಷಿಸಲಾಗುತ್ತಿದೆ. ಕ್ಯಾನ್ಸರ್ ರೋಗಕ್ಕೆ ಉಪಯೋಗಿಸುವ ದುಬಾರಿಯಾದ ಔಷಧಗಳು ಕೂಡ ಕಡಿಮೆ ದರದಲ್ಲಿ ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿದೆ ಎಂದರು.

ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಬಾಳಿಗ ಆಸ್ಪತ್ರೆಯ ಡಾ.ಪಿ.ವಿ ಭಂಡಾರಿ, ಡಾ. ವೀಣಾ, ವಿವೇಕ್ ಕಾಮತ್, ಪ್ರೊ. ಶಶಿರೇಖಾ ಉಪಸ್ಥಿತರಿದ್ದರು. ಬ್ರಹ್ಮಾವರ ಜಯಂಟ್ಸ್ ಗ್ರೂಪ್ ಅಧ್ಯಕ್ಷ ಸುಂದರ್ ಪೂಜಾರಿ ಮೂಡುಕುಕ್ಕುಡೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಆನಂದ್ ಜತ್ತನ್ ನಿರೂಪಿಸಿ, ಮಧುಸೂದನ ಹೇರೂರು ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net