ಜನೌಷಧ ಕೇಂದ್ರಗಳಿಂದ ಜನರಿಗೆ ಅನುಕೂಲ: ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

22
Published on

ಮೈಸೂರು: ಜನೌಷಧ ಕೇಂದ್ರಗಳಿಂದ ಎಲ್ಲ ವರ್ಗದ ಜನರಿಗೆ ಹೆಚ್ಚು ಪ್ರಯೋಜನಗಳಾಗಿವೆ. ಜನೌಷಧ ಬಳಕೆ ಮತ್ತು ಉಪಯೋಗಗಳ ಬಗ್ಗೆ ಈಗಾಗಲೇ ಸಾಕಷ್ಟು ಅಭಿಯಾನ ನಡೆಸಲಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಜಿಲ್ಲಾ ಆಸ್ಪತ್ರೆ ಆವರಣ ಮತ್ತು ಕೆ.ಆರ್. ಆಸ್ಪತ್ರೆಯ ಆವರಣದಲ್ಲಿ ಆರಂಭಿಸಲಾದ ಪ್ರಧಾನ ಮಂತ್ರಿ ಜನೌಷಧ ದಿನಾಚರಣೆಗೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಔಷಧಗಳಿಗೆ ಹೆಚ್ಚು ಹಣ ವ್ಯಯಿಸುತ್ತಿದ್ದ ಜನರು ಈಗ, ಜನೌಷಧ ಕೇಂದ್ರಗಳಲ್ಲಿ ಕಡಿಮೆ ಬೆಲೆಗೆ ಔಷಧಗಳನ್ನು ಖರೀದಿಸುವ ಮೂಲಕ ಹಣ ಉಳಿಸುತ್ತಿದ್ದಾರೆ ಎಂದು ಹೇಳಿದರು.

ಜನೌಷಧ ಮಳಿಗೆಗಳಲ್ಲಿ ಬಿಪಿ, ಶುಗರ್, ಅಸಿಡಿಟಿ ಹಾಗೂ ಸಾಂಕ್ರಾಮಿಕ ಕಾಯಿಲೆಗಳಿಗೆ ಔಷಧ ಲಭ್ಯವಾಗುತ್ತಿವೆ. 2027ಕ್ಕೆ 25 ಸಾವಿರ ಕೇಂದ್ರಗಳನ್ನು ಸ್ಥಾಪಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕಿದೆ. ಉತ್ತಮ ಆರೋಗ್ಯ ಸೇವೆ ನೀಡುವ ಸದುದ್ದೇಶದಿಂದ ಪ್ರಧಾನಿ ಮೋದಿ ಅವರು ಜನೌಷಧ ಕೇಂದ್ರಗಳಿಗೆ ನೂತನ ಸಂದೇಶ ನೀಡಿದರು ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ.ಕುಮಾರಸ್ವಾಮಿ ಮಾತನಾಡಿ, ಜನೌಷಧ ಮಳಿಗೆಯಲ್ಲಿ ಕಡಿಮೆ ದರದಲ್ಲಿ ಸಿಗುವ ಔಷಧಗಳನ್ನು ಖರೀದಿಸಿ ಉಪಯೋಗ ಪಡೆದುಕೊಳ್ಳಬೇಕು. ಸಾರ್ವಜನಿಕರಲ್ಲಿ ಜನೌಷಧ ಮಳಿಗೆ ಮತ್ತು ಔಷಧಗಳ ಕುರಿತು ಅರಿವು ಮೂಡಿಸಬೇಕು ಎಂದು ಹೇಳಿದರು.

ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ.ಅಮರ್‌ನಾಥ್, ಕೆ.ಆರ್.ಆಸ್ಪತ್ರೆಯ ಡೀನ್ ಮತ್ತು ನಿರ್ದೇಶಕಿ ಡಾ.ದಾಕ್ಷಾಯಿಣಿ, ವೈದ್ಯರಾದ ಡಾ.ಕುಸುಮಾ, ಡಾ ದಿನೇಶ್, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಮುನೀಂದ್ರಮ್ಮ, ಜಿಲ್ಲಾ ಆಸ್ಪತ್ರೆಯ ವೈದ್ಯಕೀಯ ತಜ್ಞರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net