

ಚನ್ನರಾಯಪಟ್ಟಣ: ಎಲ್ಲರಿಗೂ ಕೈಗೆಟುಕುವ ಬೆಲೆಯಲ್ಲಿ ಜೆನೆರಿಕ್ ಔಷಧ ಲಭ್ಯವಾಗುವಂತೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಜನೌಷಧ ಯೋಜನೆಯನ್ನು ಪ್ರಾರಂಭಿಸಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ಬಾಗೂರು ರಸ್ತೆಯ ಟಿಪ್ಪು ವೃತ್ತದಲ್ಲಿ ಭಾನುವಾರ ನೂತನವಾಗಿ ಆರಂಭಗೊಂಡ ಪ್ರಧಾನ ಮಂತ್ರಿ ಭಾರತೀಯ ಜನ ಔಷಧ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಸಾಮಾನ್ಯವಾಗಿ ಎಲ್ಲ ಔಷಧ ಅಂಗಡಿಗಳು, ಖಾಸಗಿ ಆಸ್ಪತ್ರೆಗಳಲ್ಲಿ ಬ್ರಾೃಂಡೆಡ್ ಔಷಧಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತದೆ. ಹೀಗಾಗಿ ಬಡವರ ಪಾಲಿಗೆ ಕೈಗೆಟುಕದಂತೆ ಆಗಿವೆ. ಹೀಗಾಗಿ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಔಷಧಗಳನ್ನು ಪೂರೈಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪ್ರಧಾನ ಮಂತ್ರಿ ಜನೌಷಧ ಯೋಜನೆ ಸಹಕಾರಿ ಎಂದು ತಿಳಿಸಿದರು.
ಆರೋಗ್ಯವೇ ಭಾಗ್ಯ ಎಂಬಂತೆ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಲ್ಲರ ಹಕ್ಕು. ಹಣದ ಕೊರತೆಯಿಂದ ಯಾರೂ ಚಿಕಿತ್ಸೆಗೆ ದೂರ ಉಳಿಯಬಾರದು ಎಂಬ ಆಶಯದೊಂದಿಗೆ ಹಾಗೂ ಎಲ್ಲರಿಗೂ ಆರೋಗ್ಯದ ಹಕ್ಕನ್ನು ಕೊಡುವ ಗುರಿಯೊಂದಿಗೆ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಮತ್ತು ಲಭ್ಯವಿರುವ ಆರೋಗ್ಯ ಸೇವೆಗಳನ್ನು ಒದಗಿಸುವ ಗುರಿ ಹೊಂದಿದ್ದು, ವೈದ್ಯಕೀಯ ವೆಚ್ಚಗಳಿಂದ ಉಂಟಾಗುವ ಆರ್ಥಿಕ ಹೊರೆಗಳನ್ನು ಈ ಯೋಜನೆ ಡಿಮೆ ಮಾಡುತ್ತದೆ. ಪ್ರಾಥಮಿಕ, ಮಾಧ್ಯಮಿಕ ಮತ್ತು ತೃತೀಯ ಹಂತಗಳಲ್ಲಿ ಕೈಗೆಟುಕುವ ಮತ್ತು ನಗದು ರಹಿತ ಆರೋಗ್ಯ ಸೇವೆಗಳನ್ನು ಖಾತ್ರಿಪಡಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.
ಪುರಸಭಾಧ್ಯಕ್ಷ ಸಿ.ಎನ್.ಮೋಹನ್, ಉಪಾಧ್ಯಕ್ಷೆ ರಾಣಿಕೃಷ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಎ.ಗಣೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಅನಿಲ್ ಮರಗೂರು, ಪುರಸಭಾ ಸದಸ್ಯರಾದ ಸುರೇಶ್, ರವಿ ಮತ್ತು ಮಾಜಿ ಸದಸ್ಯ ಆನ್ಸರ್ ಬೇಗ್, ಮುಖಂಡರಾದ ಭುವನಹಳ್ಳಿ ಯೋಗೀಶ್, ಪುರಿ ಮಂಜು, ರಾಜು, ಪಠಾಣ್, ಹಕ್ಕು, ಫೈಜಲ್, ಜನೌಷಧ ಕೇಂದ್ರದ ಮುಖ್ಯಸ್ಥ ಸತ್ಯ ಇತರರು ಇದ್ದರು.